More

    ದೀಪಾವಳಿ ಪಟಾಕಿಯಿಂದ ಏಳು ಜನರಿಗೆ ಸಣ್ಣಪುಟ್ಟ ಗಾಯ

    ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯನ್ನು ನಗರದಲ್ಲೆಡೆ ಜನರು ಮಂಗಳವಾರ ಆಚರಿಸಿ ಸಂಭ್ರಮಿಸಿದರು. ಮನೆಗಳಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜಿಸಿದ ಹೆಣ್ಣುಮಕ್ಕಳು ದೇವಿಯನ್ನು ಪ್ರಾರ್ಥಿಸಿದರು. ಮಕ್ಕಳು, ಯುವಕರು ಹಿರಿಯರೊಂದಿಗೆ ಪಟಾಕಿ ಸಿಡಿಸಿದರು.
    ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಪಟಾಕಿ ವಹಿವಾಟು ನಡೆದಿದೆ. ಹೈಸ್ಕೂಲ್ ಮೈದಾನದ 57 ಮಳಿಗೆಗಳಲ್ಲಿ ರೀಟೇಲ್ ಹಾಗೂ ಹೋಲ್‌ಸೇಲ್ ವ್ಯಾಪಾರ ಉತ್ತಮವಾಗಿ ನಡೆಯಿತು. ಮೊದಲೇ ನಿರ್ಧರಿಸಿದಂತೆ ಜಿಎಂಐಟಿ ಕಾಲೇಜು ಬಳಿ ತಾತ್ಕಾಲಿಕ ಮಳಿಗೆಗಳನ್ನು ಹಾಕಿದ್ದರೆ ಇಷ್ಟೂ ವ್ಯಾಪಾರ ಆಗುತ್ತಿರಲಿಲ್ಲ ಎಂದು ಪಟಾಕಿ ವರ್ತಕರೊಬ್ಬರು ಹೇಳಿದರು.
    ಹೈಸ್ಕೂಲ್ ಮೈದಾನದಲ್ಲಿ 10 ಅಡಿ ಅಂತರದಲ್ಲಿ ಮಳಿಗೆಗಳನ್ನು ಇರಿಸಿದರೆ ಮಾತ್ರವೇ ಪರವಾನಿಗೆ ನೀಡುವುದಾಗಿ ಕೆಲವು ಅಧಿಕಾರಿಗಳು ಕಿರಿಕಿರಿ ನೀಡಿದರು. ತಹಸೀಲ್ದಾರ್ ಕಚೇರಿಯಿಂದ ಶನಿವಾರ ರಾತ್ರಿ ಪರವಾನಿಗೆ ದೊರೆದಿತ್ತು. ಮೊದಲೇ ಸಿಕ್ಕಿದ್ದರೆ ಇನ್ನೂ ಹೆಚ್ಚಿನ ವಹಿವಾಟು ನಿರೀಕ್ಷಿಸಬಹುದಿತ್ತು ಎಂದೂ ವಿವರಿಸಿದರು.
    ಏಳು ಜನರಿಗೆ ಗಾಯ:
    ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು ಏಳು ಹೊರರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಮೂವರಿಗೆ ಹಣೆ, ಕೈಗೆ ಗಾಯವಾಗಿದ್ದು ಬಿಟ್ಟರೆ ಕಣ್ಣು ಕೆಂಪಾಗುವಿಕೆ, ಕಣ್ಣುರಿ ಇತ್ಯಾದಿಗೆ ಚಿಕಿತ್ಸೆ ಪಡೆದರು. ಅದೃಷ್ಟವಶಾತ್ ಕಣ್ಣಿನ ಯಾವುದೇ ಅನಾಹುತವಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
    ಎಲ್ಲೆಲ್ಲೂ ಕಸದ ರಾಶಿ
    ದೀಪಾವಳಿ ಹಬ್ಬವೇನೋ ಸಡಗರದಿಂದ ಮುಗಿಯಿತು. ಆದರೆ ಮೂರು ದಿನಗಳ ಕಾಲ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ನಡೆಸಿ ಉಳಿದ ಸರಕನ್ನು ಅಲ್ಲಲ್ಲಿಯೇ ಬಿಟ್ಟು ಹೋಗಿದ್ದು, ಪ್ರವಾಸಿಮಂದಿರ ರಸ್ತೆ, ಹಳೇ ಬಸ್ ನಿಲ್ದಾಣ ಬಳಿ, ನಿರ್ಮಾಣ ಹಂತದ ಹೊಸ ಬಸ್ ನಿಲ್ದಾಣ, ಹದಡಿ ರಸ್ತೆ, ನಿಟುವಳ್ಳಿ ಇತ್ಯಾದಿ ಕಡೆಗಳಲ್ಲಿ ಬುಧವಾರ ಕಸದ ರಾಶಿಯೇ ಜನರ ಕಣ್ಣಿಗೆ ರಾಚಿತು. ತಾತ್ಕಾಲಿಕ ಪಟಾಕಿ ಮಳಿಗೆಗಳು ತೆರವಾಗುತ್ತಿದ್ದು ಅಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ಗುಡ್ಡೆ ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts