More

    ದಾವಣಗೆರೆಯಲ್ಲಿ ಶೀಘ್ರ ವಿಶ್ವಕರ್ಮ ಪೀಠ-ಬಿ.ಪಿ. ಜಗನ್ನಾಥ್

    ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಶೀಘ್ರದಲ್ಲೇ ವಿಶ್ವಕರ್ಮ ಸಮಾಜದ ಪೀಠ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪೀಠದ ಆಡಳಿತಾಧಿಕಾರಿ ಬಿ.ಪಿ. ಜಗನ್ನಾಥ್ ಹೇಳಿದರು.
    ನಗರದ ಕಾಳಿಕಾದೇವಿ ರಸ್ತೆಯ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ, ವಿಶ್ವಕರ್ಮ ಸಮಾಜ ಏರ್ಪಡಿಸಿದ್ದ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವದಲ್ಲಿ ಮಾತನಾಡಿ, ವಿಶ್ವಕರ್ಮ ಹೆಸರಿನ 60ಕ್ಕೂ ಹೆಚ್ಚು ಮಠಗಳು ಸಮುದಾಯದ ಜನರ ಏಳಿಗೆಗೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷಗಳು ವಿಶ್ವಕರ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಇದಕ್ಕೆ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಕಾರಣ. ಹೀಗಾಗಿ, ರಾಜಕೀಯ ಸ್ಥಾನಮಾನ ಸೇರಿ ಇತರೆ ಅವಕಾಶ ಪಡೆಯಲು ಪೀಠ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
    ಇಲ್ಲಿ ಉಪನಯನ ಪಡೆದ ಸಮುದಾಯದ ಮಕ್ಕಳು ಗಾಯತ್ರಿ ಮಂತ್ರ ಪಠಿಸುವ ಮೂಲಕ ನಿತ್ಯವೂ ಸಂಧ್ಯಾ ವಂದನೆ ಮಾಡಿ ನಮ್ಮ ಆಚಾರ-ವಿಚಾರ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    ಸಾಹಿತಿ ನಾಗರಾಜಪ್ಪ ಅರ್ಕಾಚಾರ್ ಮಾತನಾಡಿ, ಉಪನಯನ ಎಂದರೆ ಜ್ಞಾನದ ಕಣ್ಣು ತೆರೆಸುವುದು. ಈ ಮೂಲಕ ಬ್ರಹ್ಮಚರ್ಯ ಆಶ್ರಮ ಪ್ರವೇಶಿಸಿರುವ ಸಮುದಾಯದ ಯುವಕರು ವೇದಾಗಮನ ಅಭ್ಯಾಸ ಮಾಡಬೇಕು. ಗೃಹಸ್ಥಾಶ್ರಮ, ವನಪ್ರಸ್ತಾಶ್ರಮ ಹಾಗೂ ಸನ್ಯಾಸ ಆಶ್ರಮ ಪ್ರವೇಶಿಸಿ ನಮ್ಮ ಸಮುದಾಯದ ಸಂಸ್ಕೃತಿ, ಸಂಸ್ಕಾರ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
    ಗುಳೇದಗುಡ್ಡದ ವಿಶ್ವಕರ್ಮ ಮುಖಂಡ ಅಖಂಡೇಶ್ವರ ಎಂ. ಪತ್ತಾರ ಮಾತನಾಡಿ, ವಿಶ್ವಕರ್ಮರಲ್ಲಿ ಸಂಘಟನೆ ಮತ್ತು ನಾಯಕತ್ವದ ಕೊರತೆ ಇರುವುದರಿಂದ ನಾವು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದೇವೆ ಎಂದರು.
    116 ಜನ ವಟುಗಳಿಗೆ ಶಾಸ್ತ್ರೋಕ್ತವಾಗಿ ಉಪನಯನ ನೀಡಲಾಯಿತು. ಎರಡು ಜೋಡಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
    ಆನಗೋಡಿನ ಅಂತರವಳ್ಳಿ ಶಾಖಾ ಮಠದ ಭಾಸ್ಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಬಿ. ನಾಗೇಂದ್ರಚಾರ್, ಜವಳಿ ವರ್ತಕ ಬಿ.ಸಿ. ಉಮಾಪತಿ, ದಿ ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್. ಮುರುಗೇಶ್, ಸಮಾಜದ ಗೌರವಾಧ್ಯಕ್ಷ ಬಿ.ಎಲ್. ಸೀತಾರಾಮಾಚಾರ್, ವಿಶ್ವಕರ್ಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ವಿ. ಶಿವಾನಂದ, ಮುಖಂಡರಾದ ಎನ್. ಪೂರ್ವಾಚಾರ್, ಕೆ.ಪಿ. ಪರಮೇಶ್ವರಪ್ಪ, ಎಚ್.ಒ. ವಿರೂಪಾಕ್ಷಪ್ಪ, ವಿ.ಎಂ. ಕೊಟ್ರೇಶಾಚಾರ್, ಎಂ.ಡಿ. ಮೌನೇಶಾಚಾರ್, ಬಿ.ವಿ. ರಾಜಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts