More

    ದಾವಣಗೆರೆಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ, ಶೇ. 90 ಮತ ದಾಖಲಿಸಿ- ಡಿಸಿ

    ದಾವಣಗೆರೆ: ಮೇ 10ರಂದು ಎಲ್ಲ ನಾಗರಿಕರು ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಹತ್ತುಪಟ್ಟು ಮತದಾನ ಪ್ರಮಾಣ ಹೆಚ್ಚಬೇಕಿದೆ. ಶೇ.90ರಷ್ಟು ಮತದಾನವಾಗಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
    ಜಿಲ್ಲಾಡಳಿತ, ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಡಿ ‘ಪ್ರಜಾಪ್ರಭುತ್ವದ ಹಬ್ಬ- ಮೇ 10 ಮತದಾನ’ ಎಂಬ ಧ್ಯೇಯ ಒಳಗೊಂಡಿರುವ ಶ್ವೇತವರ್ಣದ ಧ್ವಜವನ್ನು ಆರೋಹಣ ಮಾಡಿ ಮಾತನಾಡಿದರು.
    ಇಂದು ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ ಆಚರಿಸಲಾಗುತ್ತಿದ್ದು ಮತದಾರರು ತಮ್ಮ ಭಾಗದ ಮತಗಟ್ಟೆಗಳನ್ನು ತಿಳಿದುಕೊಲ್ಳಬೇಕು. ದಾವಣಗೆರೆ ನಗರದಲ್ಲಿ ಮತದಾರರು ಕಡೆ ಘಳಿಗೆಯಲ್ಲಿ ಗೊಂದಲ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಆಗದಂತೆ ಮುಂಚೆಯೇ ಮತಗಟ್ಟೆಯ ಬಗ್ಗೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದರು.
    ಎಲ್ಲ ಮತದಾರರು ಕೇವಲ ಮತದಾನ ಮಾಡಿದರೆ ಸಾಲದು. ಯಾರ ಪ್ರಲೋಭನೆ, ಆಮಿಷಕ್ಕೆ ಒಳಗಾಗದೆ ನೈತಿಕ ಹಾಗೂ ನಿರ್ಭೀತರಾಗಿ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಆಶಯ ಉಳಿಸಬೇಕು ಎಂದು ಹೇಳಿದರು.
    ಚುನಾವಣಾ ಜಿಲ್ಲಾ ಯುವ ಐಕಾನ್, ಚಿತ್ರನಟ ಪೃಥ್ವಿ ಶಾಮನೂರು ಯುವ ಮತದಾರರ ಮತದಾನದ ಸಂಕೇತವಾಗಿ 18ರ ಸಂಖ್ಯೆ ಜೋಡಣೆಯಾದ ವಿಶೇಷ ಕೇಕ್ ಅನ್ನು ಕತ್ತರಿಸಿ ಯುವ ಮತದಾರರಿಗೆ ತಿನ್ನಿಸಿದರು. ನಂತರ ಮಾತನಾಡಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರಿಗೆ ಖುಷಿ-ಹುಮ್ಮಸ್ಸು ಸಹಜ. ಆದರೆ ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಿ ಮತದಾನ ಮಾಡಬೇಕೆಂದರು.
    ಅಂಗವಿಕಲರ ಐಕಾನ್ ಆಗಿರುವ ದುರುಗೇಶ್ ಮಾತನಾಡಿ ಕಳೆದ ಬಾರಿ ಅಂಗವಿಕಲರು ಶೇ.96ರಷ್ಟು ಮತದಾನ ಮಾಡಿದ್ದರು. ಈ ಬಾರಿ ಅದರ ಪ್ರಮಾಣ ನೂರಕ್ಕೆ ದಾಟಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಶ್ರಮ ಹಾಕುತ್ತಿದೆ. ಅಂಗವಿಕಲರು ಇತರೆ ನಾಗರಿಕರಂತೆ ನಾವೂ ಕೂಡ ಸಾಮಾನ್ಯರೇ ಎಂದು ತಿಳಿದು ನಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಹೇಳಿದರು.
    ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಇಟ್ನಾಳ್ ಕಡ್ಡಾಯ ಮತದಾನ ಮಾಡುವ ಬಗ್ಗೆ ಅಲ್ಲಿದ್ದ ಅಧಿಕಾರಿ- ಸಿಬ್ಬಂದಿ, ಯುವ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ಗ್ಯಾಸ್ ಬಲೂನ್ ಗಾಳಿಯಲ್ಲಿ ಹಾರಿಬಿಡುವ ಪ್ರಯತ್ನ ನಡೆಯಿತು.
    ಈ ಸಂದರ್ಭದಲ್ಲಿ ಎಸ್ಪಿ ಡಾ.ಅರುಣ್, ಪಾಲಿಕೆ ಆಯುಕ್ತೆ ಎನ್. ರೇಣುಕಾ, ಉಪಾಯುಕ್ತ ಕೆ.ಆರ್.ಶ್ರೀನಿವಾಸ್, ಜಿಪಂ ಉಪಕಾರ್ಯದರ್ಶಿ ಮಲ್ಲಾನಾಯ್ಕ, ಡಿಎಚ್‌ಒ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿದೇರ್ಶಕ ವೀರೇಶನಾಯ್ಕ, ಇತರ ಅಧಿಕಾರಿಗಳಿದ್ದರು.

    ಸೈಕಲ್-ಬೈಕ್ ರ‌್ಯಾಲಿ
    ಮತದಾರರ ಜಾಗೃತಿ ಅಭಿಯಾನದ ಭಾಗವಾಗಿ ಭಾನುವಾರ ಬೆಳಗ್ಗೆ ದೃಶ್ಯಕಲಾ ಕಾಲೇಜು ಬಳಿ ಆರಂಭವಾದ ಸೈಕಲ್ ರ‌್ಯಾಲಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಚಾಲನೆ ನೀಡಿದರು. ಅಲ್ಲಿಂದ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ ಪಕ್ಕದ ರಸ್ತೆ ಮೂಲಕ ಶಾಮನೂರು ರಸ್ತೆ, ಗುಂಡಿ ಮಹದೇವಪ್ಪ ವೃತ್ತ ಮತ್ತಿತರೆ ರಸ್ತೆಗಳಲ್ಲಿ ಸಾಗಿತು.
    ಗುಂಡಿ ಮಹದೇವಪ್ಪ ವೃತ್ತದಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಯುವ ಮತದಾರರು ಹಾಗೂ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು. ಡೊಳ್ಳು ಕುಣಿತ ಹಾಗೂ ಗಾರುಡಿ ಗೊಂಬೆಗಳು ಆಕರ್ಷಣೆ ಹೆಚ್ಚಿಸಿದ್ದವು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಫಾಲಾಕ್ಷಪ್ಪ ನೇತೃತ್ವದಲ್ಲಿ ಅಧಿಕಾರಿ-ನೌಕರರು ಜಿಲ್ಲಾ ಕ್ರೀಡಾಂಗಣದಿಂದ ಬೈಕ್ ರ‌್ಯಾಲಿ ನಡೆಸಿದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts