More

    ದಾನ-ಧರ್ಮದ ಮಾರ್ಗ ಶ್ರೇಷ್ಠ

    ಚಿತ್ರದುರ್ಗ: ದಾನ-ಧರ್ಮದ ಮಾರ್ಗ ಅತ್ಯಂತ ಶ್ರೇಷ್ಠವಾಗಿದ್ದು, ಪರೋಪಕಾರ ಗುಣ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

    ಉಜ್ಜಯನಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ. ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳ 29ನೇ ವರ್ಷದ ಪುಣ್ಯ ಸ್ಮರಣೋತ್ಸವ, ವಟುಗಳಿಗೆ ಲಿಂಗ ದೀಕ್ಷೆ, 108 ಮಂದಿ ಮುತ್ತೈದೆಯರಿಗೆ ಉಡಿ ತುಂಬುವ, ಧರ್ಮಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

    ಶ್ರೀಮಠದಲ್ಲಿ ಅಭ್ಯಾಸಿಸಿರುವ ಅನೇಕ ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಉತ್ತಮ ಕೆಲಸಗಳಿಗೆ ಮುಂದೆ ಖಂಡಿತ ಪ್ರತಿಫಲ ಸಿಗಲಿದೆ. ಜ್ಞಾನಿಗಳ ಮಾತನ್ನು ಆಲಿಸುವುದರಿಂದ ನೈಪುಣ್ಯತೆ ಹೆಚ್ಚುತ್ತದೆ ಎಂದರು.

    ಕರ್ನಾಟಕ ಸಂಸ್ಕೃತ ವಿವಿ ಪ್ರಭಾರ ಕುಲಪತಿ ಪ್ರೊ.ವಿ.ಗಿರೀಶ್ ಚಂದ್ರ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿ ಅನೇಕ ಜೀವಿಗಳಿವೆ. ಯಾವ ಜೀವರಾಶಿಗೂ ತೊಂದರೆಯಾಗದಂತೆ, ಸಂತೋಷದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಇದೇ ನಿಜವಾದ ಮಾನವ ಧರ್ಮ ಎಂದು ಹೇಳಿದರು.

    ವೀರಶೈವ ಗುರು ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ರಾಜ್ಯ ಸೇರಿ ದೇಶದ ವಿವಿಧೆಡೆ ಜ್ಞಾನ, ವಸತಿ, ಅನ್ನ ಸೇರಿ ತ್ರಿವಿಧ ದಾಸೋಹ ನೀಡಿದ ಸುಸಂಸ್ಕೃತ ಸಮಾಜವಾಗಿದೆ. ಶ್ರೀಮಠದ ಹಿಂದಿನ ಗುರುಗಳು ಸಂಸ್ಕೃತ, ವೇದ ಪಾಠಶಾಲೆ ಆರಂಭಿಸುವ ಮೂಲಕ ಅವುಗಳ ಉಳಿವಿಗೂ ಕಾರಣರಾಗಿದ್ದಾರೆ ಎಂದರು.

    ವಿವಿ ನಿರ್ದೇಶಕ ಡಾ.ಪಾಲಯ್ಯ ಮಾತನಾಡಿ, ಗುರು ಪರಂಪರೆ ಅನಾದಿ ಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಾಗಿದೆ. ಮಠಗಳಿಂದಾಗಿ ಶೈಕ್ಷಣಿಕ, ಸಾಂಸ್ಕೃತಿಕ ಕ್ರಾಂತಿಗಳೂ ನಡೆದಿವೆ ಎಂದು ಹೇಳಿದರು.

    ಶ್ರೀಮಠದಲ್ಲಿ ಮುಂಜಾನೆ ಮರುಳು ಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇವೆ, ವಟುಗಳಿಗೆ ಲಿಂಗ ದೀಕ್ಷೆ, ಹಿರಿಯ ಗುರುಗಳ ಕತೃ ಗದ್ದಗೆಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಡಾ.ವೀರೇಶ್ ಹಿರೇಮಠ ನಡೆಸಿಕೊಟ್ಟರು.

    ಉಜ್ಜಯನಿ ಮಠದ ನಿಯೋಜಿತ ಉತ್ತರಾಧಿಕಾರಿ ಅಭಿಷೇಕ ದೇವರು, ಕಾರ್ಯದರ್ಶಿಗಳಾದ ಯುಎಂಆರ್ ಈಶ್ವರ ಪ್ರಸಾದ್, ಸಿ.ಎಂ.ಮನೋಜ್, ನಾಗಯ್ಯ, ಚಿನ್ಮಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts