More

    ದಸರೆಯಲ್ಲಿ ಮಾರ್ದನಿಸಿದ ‘ಅಪಸ್ವರ’

    ಮಂಜುನಾಥ ಟಿ.ಭೋವಿ ಮೈಸೂರು


    ಅವ್ಯವಸ್ಥೆ, ಅಧ್ವಾನ, ಅಶಿಸ್ತು…!
    ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಮೇಲಿನ ‘ಅ’ಪಸ್ವರ ಈ ಸಲವೂ ಎಲ್ಲೆಡೆ ಮಾರ್ದನಿಸಿತು. ಆರಂಭದಿಂದ ಅಂತ್ಯದವರೆಗೆ ಒಂದಿಲ್ಲೊಂದು ಅವಾಂತರಗಳು ರಾರಾಜಿಸಿದವು. ಆದರೆ, ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಲಿಲ್ಲ.

    ಮೊದಲ ಬಾರಿಗೆ ರಾಷ್ಟ್ರಪತಿ ನಾಡಹಬ್ಬಕ್ಕೆ ಚಾಲನೆ ನೀಡಿದ್ದು ಮೈಸೂರಿಗೆ ಹೆಮ್ಮೆಯ ಸಂಗತಿ. ಆದರೆ, ಅಂದಿನ ಸಭಾವೇದಿಕೆಯಲ್ಲಿ ಮೇಯರ್, ಸ್ಥಳೀಯ ಶಾಸಕರಿಗೆ ಕೊನೇ ಕ್ಷಣದಲ್ಲಿ ಅವಕಾಶ ನೀಡಲಿಲ್ಲ. ಜನಪ್ರತಿನಿಧಿಗಳಿಗೂ ಸಮರ್ಪಕವಾಗಿ ಆಸನ ವ್ಯವಸ್ಥೆ ಮಾಡಲಿಲ್ಲ. ಇದು ಆಡಳಿತ ಪಕ್ಷ ಬಿಜೆಪಿ ವಲಯದಲ್ಲೇ ಅಸಮಾಧಾನಕ್ಕೆ ಕಾರಣವಾಯಿತು.

    ವಿದೇಶಿಯರು ಕಡಿಮೆ:
    ದಸರೆಗೆ ಪ್ರಚಾರದ ಕೊರತೆ ತೀವ್ರವಾಗಿ ಕಾಡಿತು. ಉದ್ಘಾಟನೆಗೆ ಒಂದು ವಾರದ ಮೊದಲು ದಸರಾ ವೆಬ್‌ಸೈಟ್ ಉದ್ಘಾಟಿಸಲಾಯಿತು. ಇದರಿಂದ ಸಾರ್ವಜನಿಕರಿಗೆ, ದೇಶ-ವಿದೇಶಗಳ ಪ್ರವಾಸಿಗರಿಗೆ ಸಕಾಲಕ್ಕೆ ಮಾಹಿತಿ ದೊರೆಯಲಿಲ್ಲ. ಅನ್ಯ ರಾಜ್ಯಗಳ ಪ್ರವಾಸಿಗರು, ವಿದೇಶಿಯರ ಕಲರವವೂ ಹೆಚ್ಚಿನ ಪ್ರಮಾಣದಲ್ಲಿ ಗೋಚರವಾಗಲಿಲ್ಲ.

    ಕೊನೇ ಘಳಿಗೆಯಲ್ಲಿ ತಯಾರಿ:
    ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬ ವ್ಯಂಗ್ಯೋಕ್ತಿ ಪ್ರಸಕ್ತ ದಸರೆಯಲ್ಲೂ ಎದ್ದುಕಂಡಿದೆ. ಕಾಮಗಾರಿ, ಸಿದ್ಧತೆ, ಗುಂಡಿ ಮುಚ್ಚುವ ಕೆಲಸಗಳು ಈ ಬಾರಿಯೂ ಕೊನೇ ಕ್ಷಣದಲ್ಲೇ ನಡೆಯಿತು. ಇದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಆಗಲಿಲ್ಲ. ತೆರಿಗೆ ವಿನಾಯಿತಿ ಪಡೆದು ಕೆಲಸ ಕೈಗೊಂಡರೂ ದುಂದುವೆಚ್ಚ, ಹಣ ಪೋಲು ತಡೆಯಲು ಸಾಧ್ಯವಾಗಲಿಲ್ಲ.

    ಪಾಸ್ ಗೊಂದಲ:
    ‘ಈ ಸಲ ಪಾಸ್ ಇಲ್ಲ’ ಎಂದು ಹೇಳಲಾಗಿತ್ತು. ಆದರೆ ಕೊನೇ ಘಳಿಗೆಯಲ್ಲಿ ಪಾಸ್ ವಿತರಣೆ ಮಾಡಿ ಗೊಂದಲ ಸೃಷ್ಟಿಸಲಾಯಿತು. ಪಾಸ್ ಸುತ್ತಲಿನ ಸಮಸ್ಯೆಗಳು ಮತ್ತೊಮ್ಮೆ ಪುನರಾವರ್ತನೆಯಾಯಿತು.

    ಘನತೆ ಮಣ್ಣುಪಾಲು:
    ದಸರಾ ಕವಿಗೋಷ್ಠಿ ವಿವಾದಕ್ಕೆ ಕಾರಣವಾಯಿತು. ಆಹ್ವಾನ ಪತ್ರಿಕೆಯಲ್ಲಿ ಮೃತರ ಹೆಸರು, ಸಂಘಟಕರ ಹೆಸರು ಸೇರಿಸಲಾಗಿತ್ತು. ಜತೆಗೆ, ಸಂಸದರ ಕ್ಷೇತ್ರವನ್ನೇ ಬದಲಿಸಲಾಗಿತ್ತು. ಅನುಮತಿ ಪಡೆಯದೆ ಕವಿಗಳ ಹೆಸರು ಹಾಕಲಾಗಿತ್ತು. ಕೆಲ ಪ್ರದೇಶಗಳಿಗೆ ಪ್ರಾತಿನಿಧ್ಯವನ್ನೇ ನೀಡಲಿಲ್ಲ. ಈ ರೀತಿಯ ಅವಾಂತರದಿಂದ ಕವಿಗೋಷ್ಠಿಯ ಘನತೆ, ಗಾಂಭೀರ್ಯ ಮಣ್ಣುಪಾಲಾಯಿತು.

    ಲೈಟಿಂಗ್ ಸರಿ ಇರಲಿಲ್ಲ:

    ‘ಈ ಸಲದ ಲೈಟಿಂಗ್ ಸರಿಯಿಲ್ಲ’ ಎಂಬ ಅಸಮಾಧಾನದ ಮಾತು ಸಾರ್ವಜನಿಕರ ವಲಯದಲ್ಲಿ ದಟ್ಟವಾಗಿ ಪ್ರತಿಧ್ವನಿಸಿತು. ದಸರಾ ದೀಪಾಲಂಕಾರವನ್ನು 124 ಕಿ.ಮೀ. ರಸ್ತೆಗಳಲ್ಲಿ ಹಾಗೂ 96 ವೃತ್ತಗಳಲ್ಲಿ ಮಾಡಲಾಗಿದೆ. ಆದರೆ, ಈ ಹಿಂದಿನ ವ್ಯವಸ್ಥೆಗೆ ಹೋಲಿಕೆ ಮಾಡಿದರೆ ವಿಶೇಷವೂ ಇಲ್ಲ, ಚೆನ್ನಾಗಿಯೂ ಇಲ್ಲ. ಬಹಳಷ್ಟು ಕಡೆ ದೀಪಗಳು ಬೆಳಗುತ್ತಿಲ್ಲ. ನಿರ್ವಹಣೆಯನ್ನೂ ಸರಿಯಾಗಿ ಮಾಡಿಲ್ಲ.

    ಖ್ಯಾತ ಕಲಾವಿದರಿಲ್ಲ:
    ಎರಡ್ಮೂರು ದಿನಗಳ ಮುನ್ನವಷ್ಟೇ ವಿವಿಧ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಯಿತು. ಅಲ್ಲಿಯವರೆಗೆ ಸ್ಪಷ್ಟ ಚಿತ್ರಣವೇ ಇರಲಿಲ್ಲ. ಇದರಿಂದ ಗುಣಮಟ್ಟದ ಕಾರ್ಯಕ್ರಮ ಇರಲಿಲ್ಲ. ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಘನತೆ ಹೊಂದಿರುವ ಅರಮನೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳಪೆಯಾಗಿದ್ದವು. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಹಾಗೂ ಪ್ರಮುಖ, ಖ್ಯಾತನಾಮ ಕಲಾವಿದರನ್ನು ಕರೆಸಲು ಸಾಧ್ಯವಾಗಲಿಲ್ಲ.

    ರಘು ದೀಕ್ಷಿತ್‌ಗೆ ಕೈಕೊಟ್ಟರು:
    ಯುವ ದಸರಾ ಉದ್ಘಾಟನೆಗೆ ನಿಗದಿಯಂತೆ ನಾಯಕ ನಟ ಸುದೀಪ್ ಅವರನ್ನು ಕರೆತರಲು ಆಗಲಿಲ್ಲ. ಹೀಗಾಗಿ, 7 ದಿನದ ಯುವ ದಸರಾವನ್ನು 6 ದಿನಕ್ಕೆ ಕಡಿತಗೊಳಿಸಲಾಯಿತು. ಕೊನೆಯವರೆಗೂ ಕಲಾವಿದರು ಅಂತಿಮವಾಗಿರಲಿಲ್ಲ. ಕಾರಣವನ್ನೂ ತಿಳಿಸದೆ ಗಾಯಕ ರಘು ದೀಕ್ಷಿತ್ ಕಾರ್ಯಕ್ರಮ ಕೈಬಿಡಲಾಯಿತು. ಸನ್ಮಾನ, ಸಚಿವರ ಭಾಷಣ ಕಿರಿಕಿರಿ ಸಂಗೀತ ರಸಿಕರಿಗೆ ರಸಭಂಗ ಉಂಟು ಮಾಡಿತು.

    ಆಹಾರ ಮೇಳದಲ್ಲಿ ಗ್ರಾಹಕರ ಸುಲಿಗೆ:
    ಸಂಜೆ ಹೊತ್ತಿನಲ್ಲಿ ಹೆಚ್ಚು ಜನರು ಸೇರುತ್ತಿದ್ದ ಆಹಾರ ಮೇಳದಲ್ಲಿ ದುಬಾರಿ ಬೆಲೆ ನಿಗದಿ ಮಾಡಿ ಗ್ರಾಹಕರನ್ನು ಸುಲಿಗೆ ಮಾಡಲಾಯಿತು. ಆದಾಗ್ಯೂ ತಿನಿಸುಗಳು ರುಚಿಕರವಾಗಿರಲಿಲ್ಲ. ಖಾದ್ಯಗಳ ಗುಣಮಟ್ಟವೂ ಇರಲಿಲ್ಲ.

    ಫಲಪುಷ್ಟದಲ್ಲಿ ಕೆಸರುಮಯ:
    ಅರಮನೆಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಫಲಪುಷ್ಟ ಪ್ರದರ್ಶನ ಸೊಗಸಾಗಿತ್ತು. ಆದರೆ, ಪ್ರತಿವರ್ಷ ಕುಪ್ಪಣ್ಣ ಉದ್ಯಾನದಲ್ಲಿ ಏರ್ಪಡಿಸುವ ಫಲಪುಷ್ಟ ಪ್ರದರ್ಶನ ಅಧ್ವಾನವಾಗಿತ್ತು. ನಿರ್ವಹಣೆ ಸರಿ ಇರಲಿಲ್ಲ. ಮೊದಲೇ ಇಕ್ಕಟ್ಟಾಗಿರುವ ಜಾಗದಲ್ಲಿ ಫುಡ್‌ಸ್ಟ್ರೀಟ್‌ಗೆ ಹೆಚ್ಚಿನ ಜಾಗ ನೀಡಿದ್ದರಿಂದ ಅವ್ಯವಸ್ಥೆಗೆ ಕಾರಣವಾಗಿತ್ತು. ಇಲ್ಲಿ ಪಾದಚಾರಿ ಪಥಗಳು ಕೆಸರುಮಯವಾಗಿದ್ದವು.

    ಜನರಿಂದ ದೂರವಾದ ಸಿನಿ ಉತ್ಸವ:
    112 ಚಿತ್ರಗಳು ಪ್ರದರ್ಶನವಾದ ಚಲನಚಿತ್ರೋತ್ಸವ ಜನರಿಂದ ದೂರವಾಯಿತು. ಮಲ್ಟಿಫ್ಲೆಕ್ಸ್‌ಗಳಾದ ಐನಾಕ್ಸ್ ಮತ್ತು ಡಿಆರ್‌ಸಿಯಲ್ಲಿ ಮಾತ್ರ ಚಿತ್ರಗಳ ವೀಕ್ಷಣೆಗೆ ಅವಕಾಶ ನೀಡಿ, ಚಲನಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನ ಕೈಬಿಡಲಾಯಿತು. ಗ್ರಾಮಾಂತರ ಪ್ರದೇಶದ ಜನರಿಗೆ ಇದು ನಿಲುಕದ ನಕ್ಷತ್ರದಂತಾಯಿತು.

    ಅದೇ ರಾಗ, ಅದೇ ತಾಳ:
    ರೈತ ದಸರಾ, ಮಕ್ಕಳ ದಸರಾ, ಮಹಿಳಾ ದಸರಾದಲ್ಲಿ ಹೊಸತನ ಇರಲಿಲ್ಲ. ಹಳೇ ಚಟುವಟಿಕೆಗಳನ್ನೇ ಮುಂದುವರಿಸಲಾಯಿತು. 3 ತಿಂಗಳ ಕಾಲ ನಡೆಯುವ ದಸರಾ ವಸ್ತುಪ್ರದರ್ಶನ ಈ ವರ್ಷವೂ ಅರೆಬರೆಯಾಗಿಯೇ ಉದ್ಘಾಟನೆಗೊಂಡಿತು. ಮೊದಲ ಬಾರಿ ಮಾಡಿದ್ದ ವೈದ್ಯಕೀಯ ದಸರಾ ಅಂಗವಾಗಿ ಆಯೋಜಿಸಿದ್ದ ವೈದ್ಯಕೀಯ ವಸ್ತುಪ್ರದರ್ಶನ ಮಾತ್ರ ವಿಶಿಷ್ಟವಾಗಿತ್ತು.

    ಆನೆ ವಿವಾದ:
    ದಸರೆಗೆ ಗರ್ಭಿಣಿ ಆನೆ ಲಕ್ಷ್ಮೀಯನ್ನು ಕರೆತರಲಾಗಿತ್ತು. ನಿತ್ಯ ತಾಲೀಮು, ಸಿಡಿಮದ್ದಿನ ಅಭ್ಯಾಸ ಮಾಡಿಸಿ ಅದಕ್ಕೆ ತೊಂದರೆ ಉಂಟು ಮಾಡಿದ್ದು ದೊಡ್ಡ ವಿವಾದ ಸೃಷ್ಟಿಸಿತು.

    ಒಟ್ಟಿನಲ್ಲಿ ಪ್ರತಿವರ್ಷ ಸಮಸ್ಯೆಗಳು ಪುನರಾವರ್ತನೆಯಾಗುತ್ತಿವೆ. ಇದಕ್ಕೆ ಮದ್ದು ಕಂಡು ಹಿಡಿಯುವ ಕೆಲಸ ಮಾತ್ರ ಆಗುತ್ತಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ದಸರೆಯ ಘನತೆ, ಗೌರವ ಹಿಗ್ಗಿಸುವ ಬದಲು ಕುಗ್ಗಿಸುವ ಕೆಲಸವಾಗುತ್ತಿದೆ. ದಸರಾ ಹೆಸರಿನಲ್ಲಿ ವಿವಿಧ ಊರಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಮೂಲ ದಸರಾವನ್ನು ಗೌಣ ಮಾಡಲಾಗುತ್ತಿದೆ.

    ಜಂಬೂ ಸವಾರಿಯಲ್ಲಿ ಅನ್ಯ ದರ್ಬಾರ್:
    ಜಂಬೂಸವಾರಿ ಮೆರವಣಿಗೆ ಹಿಂದೆಂದೂ ಕಂಡರಿಯದಷ್ಟು ಅಧ್ವಾನ, ಅವ್ಯವಸ್ಥೆಯಿಂದ ಕೂಡಿತ್ತು. ಅಂಬಾರಿ ಸಾಗುವ ಕಾರಿಡಾರ್‌ನಲ್ಲಿ ಅನ್ಯರ ದರ್ಬಾರ್ ಕಣ್ಣಿಗೆ ಕುಕ್ಕಿತು. ಜನರನ್ನು ನಿಯಂತ್ರಿಸಬೇಕಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರಿಂದ ಪರಿಸ್ಥಿತಿ ಹದಗೆಟ್ಟಿತು. ಆನೆಗಳ ಸಮೀಪವೇ ಜನರು ಸುಳಿದಾಡುವಷ್ಟು ಸಲೀಸಾಗಿತ್ತು. ಹಿರಿಯ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಭದ್ರತಾಲೋಪ ಎದ್ದು ಕಾಣುತ್ತಿತ್ತು. ‘ಇಂಥ ವರ್ಸ್ಟ್ ದಸರಾವನ್ನು ಎಂದೂ ನೋಡಿರಲಿಲ್ಲ’ ಎಂದು ಹಿರಿಯರು ಗೊಣಗುವ ಮಾತುಗಳು ಅರಮನೆಯಲ್ಲಿ ದಟ್ಟವಾಗಿ ಕೇಳಿಸಿತು.
    ಜತೆಗೆ, ನಗರದ ಹೃದಯ ಭಾಗದಲ್ಲಿ ಸಂಜೆ ಹೊತ್ತಿನಲ್ಲಿ ಜಾರಿ ಮಾಡಿದ ಏಕಮುಖ ಸಂಚಾರ ವ್ಯವಸ್ಥೆ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಅರಮನೆ ಸುತ್ತಲು ವಾಹನದಟ್ಟಣೆ ತಪ್ಪಿಸುವ ಬದಲು ಅಲ್ಲಿಗೆ ಎಲ್ಲ ವಾಹನಗಳು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು.

    ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಿಸಲು ನಿರೀಕ್ಷೆಗೂ ಮೀರಿ ಜನರು ಬಂದಿದ್ದಾರೆ. ಲಕ್ಷಾಂತರ ಜನರು ಪಾಲ್ಗೊಂಡ ವೇಳೆ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಜನರಿಗೆ ಅನನುಕೂಲವಾಗಿದ್ದರೆ ಸರ್ಕಾರ ಮತ್ತು ಉಸ್ತುವಾರಿ ಸಚಿವನಾಗಿ ಕ್ಷಮೆ ಕೋರುತ್ತೇನೆ.
    ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts