More

    ದರ್ಪದ ಆಡಳಿತಕ್ಕೆ ಬ್ರೇಕ್ ಹಾಕಿ


    ಸಂಸದೆ ಸುಮಲತಾ ಅಂಬರೀಶ್ ಮನವಿ

    ಸಾಲಿಗ್ರಾಮ: ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜನರ ಕೆಲಸ ಮಾಡಿಸಬೇಕೆಂದರೆ ಕಷ್ಟಪಡಬೇಕಿದ್ದು, ತಾಲೂಕಿನಲ್ಲಿ ದರ್ಪದ ಆಡಳಿತಕ್ಕೆ ಬ್ರೇಕ್ ಬೀಳಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

    ತಾಲೂಕಿನ ಚುಂಚನಕಟ್ಟೆ ಹೋಬಳಿಯ ಬಂಡಳ್ಳಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸಮುದಾಯ ಭವನ ಕಾಮಗಾರಿ ವೀಕ್ಷಿಸಿದ ಬಳಿಕ ಉಪ್ಪಾರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.

    ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸತ್ ಸದಸ್ಯರು ಪ್ರವಾಸದಲ್ಲಿದ್ದರೂ ತಹಸೀಲ್ದಾರ್ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಹಾಜರಿಲ್ಲ. ಅಧಿಕಾರಿಗಳು ಒಬ್ಬ ವ್ಯಕ್ತಿಯ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದು, ಇಂತಹ ಕಾರ್ಯಗಳಿಂದಲೇ ಬೇಸತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿಯೂ ಜನತೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಹೇಳಿದರು.

    ಇಲ್ಲಿನ ಅಧಿಕಾರಿಗಳು ಆಮಿಷಗಳಿಗೆ ಬಲಿಯಾಗಿ ಕೆಲಸ ಮಾಡುತ್ತಿದ್ದು, ಗ್ರಾಮಾಂತರ ಭಾಗದಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯವಾಗಿ ಶಾಸಕರೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಇಲ್ಲಿ ದೌರ್ಜನ್ಯ, ದಬ್ಬಾಳಿಕೆಯಿಂದ ಅಧಿಕಾರ ನಡೆಸುತ್ತಿದ್ದು, ಯಾವುದೇ ಜಾತಿ ಮತ್ತು ಧರ್ಮ ನೋಡದೆ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು. ನೀವು ಕೊಟ್ಟಿರುವ ಎಂಪಿ ಸ್ಥಾನದ ಅರಿವು ನನಗಿದ್ದು, ನನ್ನ ಅನುದಾನದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಬಯಕೆ ನನ್ನದು. ತಾಲೂಕಿನ ಜನರು ಅಂಬರೀಶ್ ಮತ್ತು ನನ್ನ ಮೇಲೆ ಇಟ್ಟ ಭರವಸೆ ಯನ್ನು ಉಳಿಸಿಕೊಳ್ಳುತ್ತೇನೆ. ಚುನಾವಣೆಯಲ್ಲಿ ಹಣ ಪಡೆದು ಓಟು ಹಾಕುವ ಬದಲು ಗ್ರಾಮದ ಕೆಲಸಗಳನ್ನು ಮಾಡುವ ಉತ್ತಮ ಜನಪ್ರತಿನಿಧಿಗಳನ್ನು ಚುನಾಯಿಸಿದರೆ ನಿಮ್ಮ ಗ್ರಾಮಗಳು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್, ಕುರುಬರ ಸಂಘದ ಅಧ್ಯಕ್ಷ ಶಿವಣ್ಣ, ಜ್ಞಾನಬಂಧು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕುಮಾರಸ್ವಾಮಿ, ಉಪ್ಪಾರ ಸಮಾಜದ ಗೌರವಾಧ್ಯಕ್ಷ ಮೈಲಾರಪ್ಪ, ಅಧ್ಕಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ಮಲ್ಲಯ್ಯ, ಕಾರ್ಯದರ್ಶಿ ಮಾದೇಗೌಡ, ಸಹಕಾರ್ಯದರ್ಶಿ ಯೋಗೇಶ್, ಖಜಾಂಚಿ ಮಹದೇವ್, ಶಿಕ್ಷಕ ಶಿವಾನಂದ್, ಮಹದೇವ್,ದೇವರಾಜು, ಮಹೇಂದರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts