More

    ದಯವಿಟ್ಟು ನಮ್ಮನ್ನು ವಾಪಸ್ ಕರೆಸಿಕೊಳ್ಳಿ


    ವಾದಿರಾಜ ವ್ಯಾಸಮುದ್ರ ಕಲಬುರಗಿ
    ದಯವಿಟ್ಟು ನಮ್ಮನ್ನು ವಾಪಸ್ ಕರೆಸಿಕೊಳ್ಳಿ. ನಾವು ಇಲ್ಲಿ ಅನ್ನ ನೀರಿಲ್ಲದೆ ಬದುಕುವುದು ದುಸ್ತರವಾಗಿದೆ. ನಮ್ಮ ಮಕ್ಕಳ ಸ್ಥಿತಿಯೂ ಶೋಚನೀಯವಾಗಿದೆ. ಮಹಾರಾಷ್ಟ್ರ ಸರ್ಕಾರದವರು ಕ್ಯಾರೆ ಎನ್ನುತ್ತಿಲ್ಲ. ಅಲ್ಲಿ ಇರಲೂ ಬಿಡುತ್ತಿಲ್ಲ, ಇಲ್ಲಿಗೆ ಬರಲೂ ಬಿಡುತ್ತಿಲ್ಲ.
    ಮುಂಬೈನ ಬೈಂದರ್ ಪ್ರದೇಶದಲ್ಲಿ ಸಿಲುಕಿರುವ ಅಲೆಮಾರಿ ಜನಾಂಗದವರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿನ ಪ್ರಮುಖ ಅಂಶಗಳಿವು. ಸುಮಾರು 500 ಅಲೆಮಾರಿಗಳು ಬೈಂದರ್ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಅನ್ನ, ನೀರಿಲ್ಲದೆ ಒದ್ದಾಡುತ್ತಿದ್ದು, ಮಕ್ಕಳು ಮರಿಗಳೊಂದಿಗೆ ರಸ್ತೆಯಲ್ಲೇ ದಿನದೂಡುವಂತಾಗಿದೆ ಎಂದು ತಮ್ಮ ದಯನೀಯ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.
    ಕುಡಿಯೋಕೆ ನೀರು ಕೇಳಿದರೂ ಮಹಾರಾಷ್ಟ್ರ ಜನ ಹೊಡಿಯೋಕೆ ಮುಂದಾಗುತ್ತಿದ್ದಾರೆ. ಆದ್ದರಿಂದ ಇಲ್ಲಿಯ ಆಡಳಿತದೊಂದಿಗೆ ಕೂಡಲೇ ಸಂಪರ್ಕಿಸಿ ನಮ್ಮನ್ನು ವಾಪಸ್ ಕರೆಸಿಕೊಳ್ಳಿ ಎಂದು ಕೈಬರಹದಲ್ಲಿರುವ ಪತ್ರದಲ್ಲಿ ಕೋರಿದ್ದಾರೆ.

    ಭವಿಷ್ಯ ಹೇಳುವವರ ಭವಿಷ್ಯವೇ ಅತಂತ್ರ
    ಮಹಾರಾಷ್ಟ್ರದಿಂದ ಅಫಜಲಪುರಕ್ಕೆ ಬಂದಿರುವ ಭವಿಷ್ಯ ಹೇಳುವ ಅಲೆಮಾರಿಗಳ ಭವಿಷ್ಯವೇ ಅತಂತ್ರಗೊಂಡಿದೆ. ಉಸ್ಮಾನಾಬಾದ್ ಜಿಲ್ಲೆಯಲ್ಲಿ ಗೋಸಾವಿ ಜನಾಂಗದ ಸುಮಾರು 30 ಅಲೆಮಾರಿಗಳು ಜನರ ಭವಿಷ್ಯ ಹೇಳುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಕರೊನಾ ಎಲ್ಲೇ ಮೀರಿದ್ದರಿಂದ ಆತಂಕಗೊಂಡು ಅಫಜಲಪುರಕ್ಕೆ ವಾಪಸಾಗಿದ್ದು, ತುತ್ತು ಅನ್ನ ಸಿಗದೆ ಯಾತನೆ ಅನುಭವಿಸುತ್ತಿದ್ದಾರೆ.

    ಊಟಕ್ಕೂ ಪರದಾಟ
    ಇನ್ನು ಕಲಬುರಗಿ ನಗರದ ರಾಮತೀರ್ಥ, ನೃಪತುಂಗ ಕಾಲನಿಯಲ್ಲಿರುವ ಅಲೆಮಾರಿ ಕುಟುಂಬಗಳು, ಕುಷ್ಟರೋಗಿಗಳು ಒಂದ್ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಹೋಗದಂತೆ ಜಿಲ್ಲಾಡಳಿತ ಆದೇಶ ನೀಡಿದ್ದರಿಂದ ಭಿಕ್ಷೆ ಬೇಡಿ, ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಅನಾಥಪ್ರಜ್ಞೆ ಎದುರಿಸುತ್ತಿವೆ. ಅಲ್ಲಿ ಸಹಾಯ ಮಾಡುತ್ತಾರೆ ಇಲ್ಲಿ ಸಹಾಯ ಮಾಡುತ್ತಾರೆ ಎಂದು ಸುದ್ದಿ ಕೇಳಿದ್ದೇವೆ. ನಮಗೂ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಆದರೆ ಇವರು ಒಂದೇ ಕಡೆ ಇರುವುದು ಕಷ್ಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts