More

    ದಮನಕಾರಿ ನೀತಿ ಕೈ ಬಿಡಲು ಖಾಸಗಿ ಶಾಲೆಗಳ ಆಗ್ರಹ

    ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಅನುದಾನ ರಹಿತ ಖಾಸಗಿ ಶಾಲಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ನಗರ ಕಲಾಭವನದಿಂದ ಪ್ರತಿಭಟನೆ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು, ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಿರುಕುಳ ನೀಡುವುದಲ್ಲದೆ, ದಮನಕಾರಿ ನೀತಿ ಹೇರುತ್ತಿದೆ. ಕೂಡಲೆ ಈ ಕಾರ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

    ಬೋಧನಾ ಶುಲ್ಕದಲ್ಲಿ ಶೇ. 30ರಷ್ಟು ಕಡಿತಗೊಳಿಸಿ ಉಳಿದ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಬಜೆಟ್ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ಕಡಿತದ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿರ್ಧರಿಸಬೇಕು. ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿ ವರ್ಷ ಶಾಲಾ ನವೀಕರಣ ಮಾಡಬೇಕೆಂಬ ಆದೇಶ ಸರಿಯಾದ ಕ್ರಮವಲ್ಲ. ಈ ಹಿಂದಿದ್ದ 5, 15 ವರ್ಷ ಮತ್ತು ನಂತರ ಶಾಶ್ವತ ಅನುಮೋದನೆ ಎಂಬ ಆದೇಶವನ್ನು ಮರು ಆದೇಶ ಮಾಡಬೇಕು. ಮೂಲ ವೇತನಕ್ಕೆ ಸಂಬಂಧಿಸಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಪಡೆಯುವ ಶುಲ್ಕ, ಶಿಕ್ಷಕರ ಸಂಖ್ಯೆಯ ಅನುಪಾತದಲ್ಲಿ ವೇತನ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

    ಖಾಸಗಿ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಸಮಸಮನಾಗಿ ನೋಡಿದಾಗಲೇ ಶಿಕ್ಷಣದಲ್ಲಿ ಹೊಸತನ ಬರಲು ಸಾಧ್ಯ. ಹೀಗಾಗಿ ಸರ್ಕಾರ ಶಿಕ್ಷಣದ ವಿಷಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅವೈಜ್ಞಾನಿಕ ಆದೇಶ ಮುಂದುವರಿದರೆ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಲಾಯಿತು.

    ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ, ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಪ್ರಕಾಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಮಹೇಂದ್ರ ಸಿಂಘ, ರಾಜಾ ದೇಸಾಯಿ, ಗುರುಶಾಂತ ವಳಸಂಗ, ವಿಶ್ವನಾಥ ರಾನಡೆ, ಭಾಸ್ಕರ್ ಸೊಲ್ಲಾಪುರಕರ, ಈಶ್ವರ ಲದ್ದಡ, ಮಹೇಶ ದ್ಯಾವಪ್ಪನವರ, ಜಿ.ಎಸ್. ನಾಯಕ, ಮಹಾವೀರ ಉಪಾಧ್ಯೆ, ಡಾ. ರಾಜೇಂದ್ರ ಮಾಳವಾದೆ, ಎಸ್.ವಿ. ಸಾಲಿಮಠ, ಲಕ್ಷ್ಮಣ ಉಪ್ಪಾರ, ರಾಘವೇಂದ್ರ ಸೊಂಡೂರ, ಪ್ರತಿಭಾ ಕುಲಕರ್ಣಿ, ಸಂಜೀವ ಪಾಟೀಲ, ವಿನಯ ನಾಡಿಗೇರ, ರಮೇಶ ಹೆರಲೇಕರ, ವಿಜಯಲಕ್ಷ್ಮೀ ಸಂಭಾಜಿ, ಗುರುರಾಜ ಹುಣಸಿಮರದ, ಜಗದೀಶ ಕೋನಿ, ಆರ್.ಎಂ. ಮುಲ್ಲಾ ಸೇರಿ 80 ಶಾಲೆಗಳ 1500ಕ್ಕೂ ಹೆಚ್ಚು ಶಿಕ್ಷಕರು-ಶಿಕ್ಷಕಕೇತರ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts