More

    ದಬ್ಬೆಸಾಲದಲ್ಲಿ ಮೂಲಸೌಕರ್ಯವಿಲ್ಲ

    ಶ್ರೀಧರ ಅಣಲಗಾರ ಯಲ್ಲಾಪುರ

    ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ದಬ್ಬೆಸಾಲ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರ ಬದುಕು ದುಸ್ತರವಾಗಿದೆ. ದೇಹಳ್ಳಿ-ಬಳಗಾರ ರಸ್ತೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ದಬ್ಬೆಸಾಲ ಗ್ರಾಮಕ್ಕೆ ಸಮರ್ಪಕವಾದ ರಸ್ತೆ ಇಲ್ಲ, ಗ್ರಾಮದ ಸಮೀಪ ಇರುವ ಹಳ್ಳಕ್ಕೆ ಸೇತುವೆ ಇಲ್ಲ, ವಿದ್ಯುತ್ ಮಾರ್ಗ ಇದ್ದರೂ ಮನೆಗಳಲ್ಲಿ ಬಲ್ಬ್ ಬೆಳಗುವುದು ಅಪರೂಪಕ್ಕೆ ಮಾತ್ರ. ಹೀಗೆ ಅವ್ಯವಸ್ಥೆಗಳ ಆಗರವೇ ಆಗಿರುವ ದಬ್ಬೆಸಾಲ ಗ್ರಾಮವು ಜನಪ್ರತಿನಿಧಿಗಳಿಗೆ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ ಎನ್ನುವಂತಾಗಿದೆ. ಮಳೆಗಾಲದಲ್ಲಂತೂ ರಸ್ತೆ ಸಂಪೂರ್ಣ ರಾಡಿಮಯವಾಗುತ್ತದೆ. ವಾಹನಗಳು ಸಾಗುವುದು ಬದಿಗಿರಲಿ, ನಡೆದು ಹೋಗುವುದೂ ಕಷ್ಟವಾಗುತ್ತದೆ. ಹಳ್ಳಕ್ಕೆ ಅಡಕೆಯ ದಬ್ಬೆಗಳಿಂದ ಗ್ರಾಮಸ್ಥರೇ ನಿರ್ವಿುಸಿಕೊಂಡ ಸೇತುವೆ ದಾಟಲು ಹರಸಾಹಸಪಡಬೇಕು. ಬೇಸಿಗೆಯಲ್ಲಾದರೆ ಹಳ್ಳದ ನೀರು ಕಡಿಮೆ ಇರುವುದರಿಂದ ಹಳ್ಳದಲ್ಲೇ ಬೈಕ್ ದಾಟಿಸಬಹುದು. ಮಳೆ ಆರ್ಭಟ ಹೆಚ್ಚಾದರೆ ಆ ಸೇತುವೆಯೂ ಕೊಚ್ಚಿ ಹೋಗುತ್ತದೆ. ಹಾಗಾದಲ್ಲಿ ಹಳ್ಳದ ಆಚೆ ಇರುವ ಮೂರೂ ಕುಟುಂಬಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತವೆ. ಮಳೆಗಾಲದ ಸಂದರ್ಭದಲ್ಲಿ ಯಾರಿ ಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯಾಸಪಡಬೇಕಿದೆ. ದಬ್ಬೆಸಾಲಕ್ಕೆ ಸೌಕರ್ಯ ಕಲ್ಪಿಸಿಕೊಡಲು ಸ್ಥಳೀಯ ಗ್ರಾಪಂನಿಂದ ಹಿಡಿದು ವಿವಿಧ ಸ್ತರದ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಗ್ರಾಮವೊಂದಕ್ಕೆ ಸೌಲಭ್ಯ ಮರೀಚಿಕೆಯಾಗಿದೆ.

    ಪ್ರತಿ ವರ್ಷ ಗ್ರಾಮದ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಪಂನಲ್ಲಿ ಖರ್ಚು ಹಾಕಲಾಗುತ್ತಿದೆ. ಗ್ರಾಮಕ್ಕಾಗಿ ನೀಡಿದ ಅನುದಾನದ ಮಾಹಿತಿ ನೀಡುವುದಿಲ್ಲ, ಅಭಿವೃದ್ಧಿಯಂತೂ ದೂರದ ಮಾತು. ಈ ಕುರಿತು ಕೇಳಿದರೆ ಬೆದರಿಕೆ ಹಾಕಲಾಗುತ್ತದೆ. ಊರಿನ ಅಭಿವೃದ್ಧಿ ಹೆಸರಿನಲ್ಲಿ ಗ್ರಾಪಂನ ಮುಖಂಡರ ಅಭಿವೃದ್ಧಿಯಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಜತೆಯಲ್ಲಿ ನಮ್ಮೂರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಕಾರ್ಯವಾಗಬೇಕು.
    | ರಾಘವ ಗಾಂವ್ಕಾರ ದಬ್ಬೆಸಾಲ ಗ್ರಾಮಸ್ಥ

    ದಬ್ಬೆಸಾಲದ ಜನತೆ ಕಷ್ಟದಲ್ಲಿ ಬದುಕು ಸಾಗುತ್ತಿರುವ ವಿಷಯ ಗಮನದಲ್ಲಿದೆ. ಕಳೆದ ವರ್ಷ ರಸ್ತೆ ಅಭಿವೃದ್ಧಿಗೆ ತಾಪಂನಿಂದ ಅನುದಾನ ನೀಡುವ ನಿರ್ಣಯವಾಗಿದ್ದರೂ, ಕೊನೆಯ ಕ್ಷಣದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ 50 ಸಾವಿರ ರೂ. ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಮಳೆಗಾಲದ ನಂತರ ಕೆಲಸ ಆರಂಭವಾಗಲಿದೆ.
    | ಲಕ್ಷ್ಮೀನಾರಾಯಣ ಗುಮ್ಮಾನಿ ತಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts