More

    ದಕ್ಷಿಣ ಕೋಟೆಯಲ್ಲಿ ಎಸ್ಸೆಸ್ ದರ್ಬಾರು- ಕಾಂಗ್ರೆಸ್ ಕೈಹಿಡಿದ ಮುಸ್ಲಿಂ ಮತಗಳು

    ದಾವಣಗೆರೆ: ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾಲ್ಕನೆ ಬಾರಿಗೂ ಅಧಿಕಾರ ಹಸ್ತದ ಪಾಲಾಗಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿ, ಕೋಟೆಯಲ್ಲಿ ಮತ್ತೊಮ್ಮೆ ದರ್ಬಾರು ಆರಂಭಿಸಿದ್ದಾರೆ.
    ಇದರೊಂದಿಗೆ ದಾವಣಗೆರೆಯಲ್ಲಿ ಒಟ್ಟಾರೆ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದಂತಾಗಿದೆ. ಕಾಂಗ್ರೆಸ್‌ನ ಈ ಹಿರಿಯ ಕಟ್ಟಾಳು, 92ನೇ ಇಳಿವಯಸ್ಸಿನಲ್ಲೂ ಸ್ಪರ್ಧೆಗಿಳಿದು ಬಿಜೆಪಿಯ ಹೊಸ ಮುಖ ಬಿ.ಜಿ. ಅಜಯಕುಮಾರ್ ಅವರನ್ನು 27888 ಮತಗಳಿಂದ ಮಣಿಸಿದ್ದು ಸೋಜಿಗವೇ ಸರಿ.
    ಕಳೆದ ಬಾರಿ ಇದುವೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದ ಎಸ್ಸೆಸ್, ಈ ಬಾರಿಯೂ ಸ್ಪರ್ಧೆ ಮಾಡಿದಾಗ ಆರಂಭದಲ್ಲಿ ಕೆಲ ಮುಸ್ಲಿಂ ಮುಖಂಡರ ಅಸಮಾಧಾನ ಕಂಡುಬಂತಾದರೂ ಚುನಾವಣೆಯಲ್ಲಿ ಸದ್ದು ಮಾಡಲಿಲ್ಲ. ಇಲ್ಲಿರುವ 60 ಸಾವಿರದಷ್ಟು ಮುಸ್ಲಿಮರ ವೋಟ್ ಬ್ಯಾಂಕ್ ಕಾಂಗ್ರೆಸ್‌ಗೆ ಕೈಕೊಡಲಿಲ್ಲ.
    ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರ ಜತೆ ಉತ್ತಮ ಒಡನಾಟ ಹೊಂದಿರುವ ಅಜಯಕುಮಾರ್ ಗೆಲುವಿನ ಉಮೇದಿನಲ್ಲಿದ್ದರು. ಆದರೆ ಮುಸ್ಲಿಮರ ಶೇ.4ರ ಮೀಸಲು ರದ್ದತಿ ಕ್ರಮ ಬಿಜೆಪಿಗೆ ಮೈನಸ್ ಪ್ರಮಾಣ ಹೆಚ್ಚಿಸಿತ್ತು. ತಡವಾಗಿ ಅಭ್ಯರ್ಥಿ ಘೋಷಣೆ ಮಾಡಿದ್ದು ಕೂಡ ಪಕ್ಷದ ಹಿನ್ನೆಡೆಗೆ ಕಾರಣವಾಯಿತು.
    ಕಣದಲ್ಲಿದ್ದ ಜೆಡಿಎಸ್ ಸೇರಿ ಒಟ್ಟು ಎಂಟು ಮುಸ್ಲಿಂ ಅಭ್ಯರ್ಥಿಗಳಿದ್ದರೂ ಮತ ವಿಭಜನೆಯಾಗುವ ಲೆಕ್ಕಾಚಾರ ಕೂಡ ಹುಸಿಯಾಯಿತು. ಇನ್ನೊಂದೆಡೆ ಮುಸ್ಲಿಂ ಮತಗಳನ್ನು ಕಟ್ಟಿಹಾಕುವ ಬಿಜೆಪಿಯ ಅಂತಿಮ ತಂತ್ರಗಾರಿಕೆಯೂ ಫಲಿಸಲಿಲ್ಲ.
    ಅಜಯಕುಮಾರ್ ನಾಮಪತ್ರ ಸಲ್ಲಿಸುವ ಹಂತದಿಂದ ಪ್ರಚಾರದ ಕಡೆ ಗಳಿಗೆಯವರೆಗೂ ಹಿರಿಯ ಮುಖಂಡರು, ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ ಎಂಬ ವಿಚಾರ ಬಿಜೆಪಿ ಮೊಗಸಾಲೆಯಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಅವರಲ್ಲಿನ ಒಗ್ಗಟ್ಟಿನ ಕೊರತೆ ಕೈ ಪಾಳಯಕ್ಕೆ ಬಲ ನೀಡಿತು. ಶಾಮನೂರು ವಿರುದ್ಧ ನಿಂದಿಸಿದ್ದಾರೆ ಎಂದು ಆರೋಪಿಸಲಾದ ವೀಡಿಯೋ ಮತದಾನದ ಹಿಂದಿನ ದಿನ ಹರಿಬಿಟ್ಟಿದ್ದರ ಕಾಂಗ್ರೆಸ್‌ನ ಜಾಣ್ಮೆ ಸ್ವಲ್ಪ ವರ್ಕೌಟ್ ಆದಂತಿದೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts