More

    ದಂಡುಮಂಡಳಿ ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ!

    ಬೆಳಗಾವಿ: ಸ್ಮಾರ್ಟ್‌ಸಿಟಿ ಬೆಳಗಾವಿಯ ದಂಡು ಮಂಡಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದ್ದು, ಸರ್ಕಾರಿ ಕಚೇರಿ, ಶಾಲೆ, ಮಾರುಕಟ್ಟೆಗಳಿಗೆ ಸಂಪರ್ಕಿಸುವ ರಸ್ತೆಗಳು ಹೊಂಡ, ಗುಂಡಿಮಯವಾಗಿವೆ. ಕೆಲವೆಡೆ ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಯೊಳಗೆ ರಸ್ತೆಗಳು ಮುಳುಗಿವೆಯೋ ಎಂಬುದು ತಿಳಿಯದಂತಾಗಿದೆ. ವರ್ಷಗಳು ಕಳೆದರೂ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ.

    ದಂಡು ಮಂಡಳಿ ವ್ಯಾಪ್ತಿಯ ಮುಖ್ಯ ರಸ್ತೆಗಳು, ಒಳ ರಸ್ತೆಗಳು ಸೇರಿ ಸುಮಾರು 28 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹಾಳಾಗಿವೆ. ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ. ಹಾಳಾದ ರಸ್ತೆಗಳಿಂದ ಜನರು ಪ್ರತಿನಿತ್ಯ ಧೂಳಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಮಂಡಳಿ ಮಾತ್ರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ.

    ಅತಿವೃಷ್ಟಿ, ಕೋವಿಡ್-19, ಅನುದಾನ ಕೊರತೆ ಇತರ ಕಾರಣಗಳಿಂದ ರಸ್ತೆಗಳ ದುರಸ್ತಿ, ಮರು ನಿರ್ಮಾಣ ಕಾಮಗಾರಿ ನಡೆದಿಲ್ಲ. 2019ರಲ್ಲಿ ಧಾರಾಕಾರ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಎರಡು ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡಲು ಚುನಾವಣೆ ನೀತಿ ಸಂಹಿತೆ, ಕೋವಿಡ್-19, ಆರ್ಥಿಕ ಸಮಸ್ಯೆ ಅಡ್ಡಬಂದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸ್ಥಳೀಯರಾದ ಎಂ.ಕೆ.ಎನ್. ಮುಲ್ಲಾ, ರಾಹುಲ್ ಕೆ.ಎಸ್ ಇತರರು ದೂರಿದ್ದಾರೆ.

    ಎಲ್ಲೆಲ್ಲಿ ರಸ್ತೆಗಳು ಹಾಳು?: ನಗರದ ದಂಡು ಮಂಡಳಿ ವ್ಯಾಪ್ತಿಯ ಮಿಲ್ಟ್ರಿ ಮಹಾದೇವ ರಸ್ತೆ, ಹಿಲ್ಲಿ ರಸ್ತೆ, ಜಿಜಾಮಾತಾ ರಸ್ತೆ, ಪಿಕೆಟ್ ರಸ್ತೆ, ಸೇಂಟ್ ಫಾಲ್ ಪ್ರೌಢಶಾಲೆ ರಸ್ತೆ, ಮೀನು ಮಾರುಕಟ್ಟೆ ರಸ್ತೆ, ಪ್ರಧಾನ ಅಂಚೆ ಕಚೇರಿಯಿಂದ ರೈಲ್ವೆ ನಿಲ್ದಾಣ ರಸ್ತೆ, ಪಿಸಿ ವಿಂಗ್ ಹೌಸ್ ರಸ್ತೆ, ನಾರ್ತ್ ಟೆಲಿಗ್ರಾಫ್ ರಸ್ತೆ ಸೇರಿ ವಿವಿಧ ಕಡೆ ಮುಖ್ಯಮತ್ತು ಒಳ ರಸ್ತೆಗಳು ಹಾಳಾಗಿವೆ. ಈ ರಸ್ತೆಯಲ್ಲಿ ನಿತ್ಯವೂ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು, ಸಂಸದರು, ಶಾಸಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳ ವಾಹನಗಳು ಸಂಚರಿಸುತ್ತಿವೆ.

    ಅನುದಾನ ಕೊರತೆ ಹಾಗೂ ಮತ್ತಿತರ ಕಾರಣಗಳಿಂದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದೀಗ ಸ್ಥಳೀಯ ಶಾಸಕರು ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದರಿಂದ ಶೀಘ್ರ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು. ಲೋಕೋಪಯೋಗಿ ಇಲಾಖೆಯು ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಿದೆ.
    | ಸತೀಶ ಮನ್ನೂರಕರ ಸಹಾಯಕ ಇಂಜಿನಿಯರ್, ದಂಡು ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts