More

    ತ್ರಿ ಶತಕದತ್ತ ಕರೊನಾ ಕರಾಳಹಸ್ತ

    ಧಾರವಾಡ: ಜಿಲ್ಲೆಯಲ್ಲಿ ಶನಿವಾರ 19 ಕರೊನಾ (ಕೋವಿಡ್) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪ್ರಕರಣಗಳ ಸಂಖ್ಯೆ 293ಕ್ಕೆ ಏರಿದೆ. ಇದುವರೆಗೆ 159 ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 129 ಪ್ರಕರಣಗಳು ಸಕ್ರಿಯವಾಗಿವೆ. ಐವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಜಿಲ್ಲೆಯ 40, 43, 56, 31, 35, 23, 63, 73, 29, 54 ವರ್ಷದ ಪುರುಷರು, 44, 38, 30, 54, 66, 34, 47, 65 ವರ್ಷದ ಮಹಿಳೆಯರು ಮತ್ತು 14 ವರ್ಷದ ಒಬ್ಬ ಬಾಲಕನಲ್ಲಿ ಕರೊನಾ ಸೋಂಕು ಇರುವುದು ಶನಿವಾರ ಪತ್ತೆಯಾಗಿದೆ.

    ಸೋಂಕಿತರ ಮಾಹಿತಿ ಅಲಭ್ಯ

    ಪ್ರತಿದಿನ ಸಂಜೆ ವೇಳೆಗೆ ಕೋವಿಡ್ ಸೋಂಕಿತರ ಊರು, ಸಂಪರ್ಕದ ಮಾಹಿತಿಯನ್ನು ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಮೂಲಕ ನೀಡುತ್ತಿತ್ತು. ಆದರೆ ಶನಿವಾರ, ಸೋಂಕಿತರ ವಯಸ್ಸಿನ ಮಾಹಿತಿ ಮಾತ್ರ ನೀಡಿದೆ. ಇದರಿಂದ ಸೋಂಕಿತರ ವಿಷಯದಲ್ಲಿ ಹೆಚ್ಚಿನ ಮಾಹಿತಿ ಸಾರ್ವಜನಿಕರಿಗೆ ಅಲಭ್ಯವಾಗಲಿದೆ.

    ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ, ಅವರ ಗಂಟಲ ದ್ರವದ ಮಾದರಿ ಪರೀಕ್ಷಾ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

    ನಾಲ್ವರು ಚೇತರಿಕೆ

    ಕೋವಿಡ್​ನಿಂದ ಚೇತರಿಸಿಕೊಂಡಿರುವ ನಾಲ್ವರನ್ನು ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 36 ವರ್ಷದ ಪುರುಷ, 68 ವರ್ಷದ ಪುರುಷ, 5 ವರ್ಷದ ಬಾಲಕ ಹಾಗೂ 28 ವರ್ಷದ ಪುರುಷ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 159 ಜನ ಕೋವಿಡ್​ನಿಂದ ಗೆದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಮರಣೋತ್ತರ ಕೋವಿಡ್ ಖಚಿತ

    ರಕ್ತ ವಾಂತಿ ಕಾಯಿಲೆಯ ಶಸ್ತ್ರಚಿಕಿತ್ಸೆಗಾಗಿ ಜೂ. 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಹುಬ್ಬಳ್ಳಿ ತಾಲೂಕು ಛಬ್ಬಿಯ 73 ವರ್ಷದ ವ್ಯಕ್ತಿ ಜೂ. 24ರಂದು ಮೃತಪಟ್ಟಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ಮೂಗು ಮತ್ತು ಗಂಟಲ ದ್ರವ ಸಂಗ್ರಹಿಸಲಾಗಿತ್ತು. ಮೃತ ವ್ಯಕ್ತಿಗೆ ಕರೊನಾ ತಗುಲಿತ್ತು ಎನ್ನುವುದು ಶನಿವಾರ ಬಂದ ವರದಿಯಲ್ಲಿ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಎಚ್ಚರಿಕೆ ವಹಿಸಲು ಸೂಚನೆ

    ಹುಬ್ಬಳ್ಳಿ: ಇಬ್ಬರು ಗೃಹ ರಕ್ಷಕಿಯರಿಗೆ ಕರೊನಾ ಸೋಂಕು ದೃಢಪಟ್ಟಿರುವುದು ದುರದೃಷ್ಟಕರ. ಅವರಿಬ್ಬರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಹೆಚ್ಚು ಅಪಾಯಕಾರಿ ಹಾಗೂ ಸೀಲ್​ಡೌನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಹೆಚ್ಚು ಎಚ್ಚರಿಕೆ ವಹಿಸಲು, ಸ್ವಯಂ ರಕ್ಷಣಾ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದರು.

    ನಗರದ ಲ್ಯಾಮಿಂಗ್ಟನ್ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಾಗೂ ಸಮಾಜದ ರಕ್ಷಣೆ ಎರಡನ್ನೂ ನಾವು ಮಾಡಬೇಕಿದೆ. ಇವೆರಡೂ ಜತೆ ಜತೆಯಾಗಿ ಹೋಗಬೇಕು. ಬಿಡಲು ಬರುವುದಿಲ್ಲ. ಅವಳಿ ನಗರದ ಎಲ್ಲ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಲ್ಲಿ ಸ್ಯಾನಿಟೈಸ್ ಮಾಡಿಸುತ್ತಿದ್ದೇವೆ. ಬಹುತೇಕ ಎಲ್ಲ ಫ್ರಂಟ್ ಲೈನ್ ಪೊಲೀಸ್ ಸಿಬ್ಬಂದಿಯ ಕೋವಿಡ್ ಟೆಸ್ಟ್ ಆಗಿವೆ ಎಂದು ತಿಳಿಸಿದರು.

    55 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಹೆಚ್ಚು ಅಪಾಯಕಾರಿ ಹಾಗೂ ಮುಂಚೂಣಿ ಕರ್ತವ್ಯಕ್ಕೆ ನಿಯೋಜಿಸುತ್ತಿಲ್ಲ. ಆಯುಷ್ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಸಿಬ್ಬಂದಿಗೆ ಹೇಳಿದ್ದೇವೆ. ಹೆಗ್ಗೇರಿ ಆಯುರ್ವೆದ ಕಾಲೇಜಿನಿಂದ ಪೊಲೀಸ್ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಹಂಚಿದ್ದೇವೆ ಎಂದರು.

    ಇಂಗಳಗಿ ಗ್ರಾಮದ ಹಳೇ ಪ್ಲಾಟ್ ಸೀಲ್​ಡೌನ್

    ಕುಂದಗೋಳ: ತಾಲೂಕಿನ ಇಂಗಳಗಿ ಗ್ರಾಮದ ಹಳೇ ಪ್ಲಾಟ್ ನಿವಾಸಿಯೊಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ. ಜತೆಗೆ ಗ್ರಾಮದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಗ್ರಾಮದಲ್ಲೆಲ್ಲ ದ್ರಾವಣ ಸಿಂಪಡಿಸಲಾಗಿದೆ. ಗ್ರಾಮಕ್ಕೆ ತಹಸೀಲ್ದಾರ್ ಬಸವರಾಜ ಮೇಳವಂಕಿ, ಸಿಪಿಐ ಬಸವರಾಜ ಕಲ್ಲಮ್ಮನವರ, ಪಿಎಸ್​ಐ ನವೀನ್ ಜಕ್ಕಲಿ ಭೇಟಿ ನೀಡಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಪ್ರಭುಗೌಡ ಶಂಕಾಗೌಡಶ್ಯಾನಿ ಇತರರು ಇದ್ದರು. ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದು, ಸೋಮವಾರ ನಡೆಯುವ ಪರೀಕ್ಷೆಗೆ ಹಾಜರಾಗುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು ಎಂದು ಬಿಇಒ ಜಿ.ಎನ್. ಮಠಮತಿ ತಿಳಿಸಿದರು.

    370 ಶಂಕಿತರು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 370 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ 24998 ನಿಗಾವಹಿಸಿದವರ ಸಂಖ್ಯೆ ಶನಿವಾರ 25373ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 24167 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 23303 ಜನರ ವರದಿ ನೆಗೆಟಿವ್ ಬಂದಿವೆ. 293 ಪ್ರಕರಣಗಳು ಪಾಸಿಟಿವ್ ಬಂದಿದ್ದು, 129 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 159 ಜನರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 5 ಜನ ಮೃತಪಟ್ಟಿದ್ದಾರೆ. ಇನ್ನೂ 730 ವರದಿಗಳು ಬರಬೇಕಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts