More

    ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿರಲಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಪೌಲ್ಟ್ರಿ ಫಾಮ್ರ್ ನಡೆಸುವವರು ಸತ್ತ ಕೋಳಿಗಳು ಹಾಗೂ ಅದರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

    ಸೋಮವಾರ ನಗರದ ಹೊರವಲಯ ಕಡೇಕಲ್ ಮತ್ತು ಮತ್ತೂರು ಗ್ರಾಮದ ಬಳಿ ಸತ್ತಕೋಳಿ ತ್ಯಾಜ್ಯ ಎಸೆದ ಸ್ಥಳಗಳಿಗೆ ಡಿಎಚ್​ಒ ಜತೆ ಭೇಟಿ ನೀಡಿ ಪರಿಶೀಲಿಸಿದ ಅವರು, ಗ್ರಾಮದ ತುಂಬ ದುರ್ನಾತ ಹರಡಿ ಸಾರ್ವಜನಿಕ ಜನಜೀವನಕ್ಕೆ ಕಿರಿಕಿರಿ ಉಂಟಾಗಲಿದೆ. ಅಲ್ಲದೆ ಸತ್ತ ಕೋಳಿಗಳನ್ನು ಎಳೆದು ತಂದು ನಾಯಿಗಳು ಗ್ರಾಮದಲ್ಲಿ ಹರಡಿದ್ದು ಗ್ರಾಮದ ವಾತಾವರಣ ಕಲುಷಿತವಾಗಿದೆ. ಹಾಗಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಕೋಳಿ ಫಾಮ್ರ್ ಮಾಲೀಕರು ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಗ್ರಾಮೀಣ ಪ್ರದೇಶಗಳಲ್ಲಿ ಪೌಲ್ಟ್ರಿ ಫಾಮ್ರ್ ನಡೆಸುವವರು ಗ್ರಾಮದಿಂದ ನಿಗದಿಪಡಿಸಿದ ದೂರದಲ್ಲಿ ಘಟಕ ಸ್ಥಾಪಿಸಬೇಕು. ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ತಹಸೀಲ್ದಾರ್ ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಫಾಮ್ರ್ ನಿರ್ವಹಿಸುವವರ ವಿರುದ್ಧ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

    ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಫಾಮ್ರ್ ಮಾಲೀಕರು ಕಾಯಂ ಆಗಿ ಪಶು ವೈದ್ಯಾಧಿಕಾರಿಗಳ ಸಲಹೆ ಪಡೆಯಬೇಕು. ಅದಕ್ಕಾಗಿ ಸೂಕ್ತ ದಾಖಲೆ ನಿರ್ವಹಿಸಬೇಕು. ಪಶು ವೈದ್ಯಾಧಿಕಾರಿಗಳು ಕಾಲಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೆ ಆಯಾ ಗ್ರಾಪಂ ಪಿಡಿಒಗಳು ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.

    ಡಿಎಚ್​ಒ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಅನುಸರಿಸಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ತ್ಯಾಜ್ಯ ಹರಡಿರುವ ಸ್ಥಳದಲ್ಲಿ ಔಷಧ ಸಿಂಪಡಿಸಿ, ಸುರಕ್ಷತಾ ಕ್ರಮ ಅನುಸರಿಸಲಾಗಿದೆ ಎಂದರು.

    ಕೋಳಿ ಫಾಮ್ರ್ ಮಾಲೀಕರು ಸತ್ತಕೋಳಿ ಮತ್ತು ಅವುಗಳ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಣ ಕ್ರಮ ಅನುಸರಿಸಲು ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಟಿಎಚ್​ಒ ಡಾ. ಚಂದ್ರಶೇಖರ್ ಸೇರಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts