More

    ತೋಟದ ವಿದ್ಯುತ್ ಮಾರ್ಗ ಬದಲಿಸಿ

    ಬೀರೂರು: ತೋಟಗಳಲ್ಲಿರುವ ವಿದ್ಯುತ್ ಮಾರ್ಗ ಬದಲಿಸುವುದು, ಸುವಿಧಾ ಆಪ್​ನಲ್ಲಿ ದಾಖಲೆಗಳನ್ನು ಅಪ್​ಲೋಡ್ ಮಾಡಲು ಸರ್ವರ್ ಸಮಸ್ಯೆ ಪರಿಹರಿಸಬೇಕು ಎಂದು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಗ್ರಾಹಕರು ಮನವಿ ಮಾಡಿದರು. ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಗ್ರಾಹಕ ಚಂದ್ರಶೇಖರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಉಚಿತ 75 ಯೂನಿಟ್ ವಿದ್ಯುತ್ ಸೌಲಭ್ಯಕ್ಕೆ ಸುವಿಧಾ ಆಪ್ ಸರ್ವರ್ ಯಾವಾಗಲೂ ಕಾರ್ಯನಿರತ ಎಂದು ಬರುತ್ತಿರುವುದರಿಂದ ದಾಖಲೆಗಳನ್ನು ಅಪ್​ಲೋಡ್ ಮಾಡಲು ಆಗುತ್ತಿಲ್ಲ. ಇದಕ್ಕೆ ಪರಿಹಾರ ಸೂಚಿಸಿ ಎಂದು ಮನವಿ ಮಾಡಿದರು.

    ಮತ್ತೊಬ್ಬ ಗ್ರಾಹಕ ಸತ್ಯಮೂರ್ತಿ ಮಾತನಾಡಿ, ಎಒ-10 ಫೀಡರ್​ನ ಬಾಕಿನಕೆರೆಯಿಂದ ಹೆಳವರಹಟ್ಟಿ ವಿದ್ಯುತ್ ಮಾರ್ಗಗಳನ್ನು ನನ್ನ ತೋಟದಿಂದ ಸ್ಥಳಾಂತರಿಸಿಕೊಡಿ. ಜತೆಗೆ ತೋಟದಲ್ಲಿ ವಾಲಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಿಕೊಡಬೇಕೆಂದು ಕೋರಿದರು. ಉಳ್ಳಿನಾಗರು ಗ್ರಾಮದ ಜ್ಯೋತಿ ಮಾತನಾಡಿ, ನನ್ನ ಅಡಕೆ ತೋಟ ಮತ್ತು ತೆಂಗಿನ ತೋಟದಲ್ಲಿರುವ ವಿದ್ಯುತ್ ಮಾರ್ಗ ಬದಲಿಸುವಂತೆ ಕೋರಿದರು.

    ಗ್ರಾಹಕರ ಮನವಿ ಆಲಿಸಿದ ಎಇ ಎಂ.ಎಸ್.ನಂದೀಶ್ ಮಾತನಾಡಿ, ಮೆಸ್ಕಾಂ ಕಚೇರಿಗೆ 358 ಅರ್ಜಿಗಳು ಬಂದಿವೆ. ನಿಮ್ಮ ಅರ್ಜಿಗಳನ್ನು ಸುವಿಧಾ ಪೋರ್ಟಲ್​ನಲ್ಲಿ ದಾಖಲೆಗಳೊಂದಿಗೆ ಅಪ್​ಲೋಡ್ ಮಾಡಬೇಕಿದೆ. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಕೆಲಸವಾಗುತ್ತಿಲ್ಲ. ಕೆಲವೇ ದಿನಗಳಲ್ಲಿ ಸರಿಹೋಗುತ್ತದೆ. ಗ್ರಾಹಕರು ಆತಂಕಪಡಬೇಕಿಲ್ಲ ಎಂದರು.

    ಪಟ್ಟಣದಲ್ಲಿ ಒಟ್ಟು 1233 ವಿದ್ಯುತ್ ಕಂಬಗಳು ಇದ್ದು, ಡಿಶ್ ಕೇಬಲ್​ದಾರರಿಗೆ ಶುಲ್ಕ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. 2019-20ನೇ ಸಾಲಿನಲ್ಲಿ 12980 ರೂಪಾಯಿ ಪಾವತಿಸಿಕೊಳ್ಳಲಾಗಿದೆ. ವಾಲಿರುವ ಕಂಬಗಳನ್ನು ಶೀಘ್ರವಾಗಿ ಸರಿಪಡಿಸಿಕೊಡಲಾಗುವುದು ಎಂದರು.
    ತೋಟದಲ್ಲಿರುವ ಕಂಬಗಳನ್ನು ಸ್ಥಳಾಂತರ ಕಾಮಗಾರಿಯನ್ನು ಸ್ವಯಂ ಕಾರ್ಯನಿರ್ವಹಣೆ ಯೋಜನೆಯಡಿ ನಿರ್ವಹಿಸಿಕೊಳ್ಳಲು ತಿಳಿಸಿದರು. ಹೊಗರೇಹಳ್ಳಿ ಗ್ರಾಹಕ ಪ್ರಕಾಶ್ ಮಾತನಾಡಿ, ಬಳ್ಳಿಗನೂರು ಗ್ರಾಮ ಪಂಚಾಯಿತಿಯಲ್ಲಿ ಬೆಳಕು ಯೋಜನೆಯಡಿ ಎಷ್ಟು ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ? ಹೊಗರೇಹಳ್ಳಿ ಸರ್ಕಾರಿ ಆಸ್ಪತ್ರೆ ಎದುರಿನ ಟಿಸಿ ಮಳೆಗಾಲದಲ್ಲಿ ಗ್ರೌಂಡಿಂಗ್ ಆಗಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದೆ. ಇದಕ್ಕೆ ಪರಿಹಾರ ಏನು ಎಂದು ಪ್ರಶಿಸಿದರು.

    ಎಇ ಎಂ.ಎಸ್.ನಂದೀಶ್ ಮಾತನಾಡಿ, ಬೆಳಕು ಯೋಜನೆಯ ಮೊದಲನೇ ಹಂತದಲ್ಲಿ 9 ಫಲಾನುಭವಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಎರಡನೇ ಹಂತದಲ್ಲಿ 16 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts