More

    ತೋಟಗಾರಿಕೆ ಬೆಳೆಗೆ ತಟ್ಟಿದ ಲಾಕ್​ಡೌನ್ ಬಿಸಿ

    ಜಿ.ಬಿ. ಹೆಸರೂರ ಶಿರಹಟ್ಟಿ

    ಲಕ್ಷಾಂತರ ರೂ. ಖರ್ಚು ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ತೋಟಗಾರಿಕೆ ಬೆಳೆಗಾರ ರೈತರಿಗೆ ಲಾಕ್​ಡೌನ್ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ತಾವು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕೈಸುಟ್ಟು ಕೊಳ್ಳುವಂತಾಗಿದೆ.

    ಅನೇಕ ತೋಟಗಾರಿಕೆ ಬೆಳೆ ಆಶ್ರಿತ ರೈತರು ಕರೊನಾ ಹೊಡೆತಕ್ಕೆ ಸಿಲುಕಿ ತಾವು ಬೆಳೆದ ಬೆಳೆ ನಾಶ ಮಾಡುವುದಕ್ಕೆ ಮುಂದಾಗಿದ್ದಾರೆ. ಇಂಥ ಪರಿಸ್ಥಿತಿ ಎದುರಿಸುವ ಮೂಲಕ ಮಾಗಡಿ ಗ್ರಾಮದ ರೈತ ಮಾಜಿ ಸೈನಿಕ ರಘುನಾಥರಡ್ಡಿ ಶೆಟರಡ್ಡಿ ತಾವು ಬೆಳೆದ ಬಾಳೆಹಣ್ಣು ಊರೂರು ತಿರುಗಿ ಎಲ್ಲರಿಗೂ ಕೈಗೆಟುವ ದರದಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದನೆ ಮಾಡುವ ದಾರಿ ಕಂಡುಕೊಂಡಿದ್ದಾರೆ.

    ಶಿರಹಟ್ಟಿ ಸಮೀಪದ ಮಾಗಡಿ ಗ್ರಾಮದ ರೈತ, ಮಾಜಿ ಯೋಧನಾಗಿರುವ ರಘುನಾಥರಡ್ಡಿ ಶೆಟರಡ್ಡಿ 5.20 ಎಕರೆ ಹೊಲದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬಂಪರ್ ಬಾಳೆ ಬೆಳೆ ತೆಗೆದಿದ್ದಾರೆ. ಇನ್ನೇನು ಕಟಾವ್ ಮಾಡಿ ಮಾರುಕಟ್ಟೆಗೆ ಸಾಗಿಸಲು ಹಾಗೂ ತೋಟದಲ್ಲಿ ಖರೀದಿಸಿ ಮಾರಾಟ ಮಾಡುವ ವರ್ತಕರಿಗೆ ಮಾರಾಟ ಮಾಡಲು ಸಜ್ಜಾಗಿದ್ದರು. ಆದರೆ, ಏಕಾಏಕಿ ಕರೊನಾ ಮಹಾಮಾರಿ ಪ್ರಭಾವದಿಂದುಂಟಾದ ಲಾಕ್​ಡೌನ್ ವ್ಯವಸ್ಥೆ ರೈತನ ಆದಾಯ ನಿರೀಕ್ಷೆ ತಲೆ ಕೆಳಗಾಗುವಂತೆ ಮಾಡಿದೆ. ಬೆಳೆ ಕಟಾವ್ ಆದಂತೆ ಮಾರುಕಟ್ಟೆಯ ಹಣ್ಣು ಮಾರಾಟದ ವರ್ತಕರು ಸ್ವತಃ ತೋಟಕ್ಕೆ ಬಂದು ಯೋಗ್ಯ ದರ ನಿಗದಿಪಡಿಸಿ ಖರೀದಿ ಮಾಡುತ್ತಿದ್ದರು. ಆದರೆ, ಕರೊನಾ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಯಾವೊಬ್ಬ ವರ್ತಕ ತಿರುಗಿ ನೋಡಲು ಸಿದ್ಧನಿಲ್ಲ. ಅಕಸ್ಮಾತ್ ರೈತನೇ ಅವರಿದ್ದ ಸ್ಥಳಕ್ಕೆ ಸಾಗಿಸಲು ಸಿದ್ಧನಿದ್ದರೆ ಬೇಕಾಬಿಟ್ಟಿ ದರ ಕೇಳುವುದರಿಂದ ರೈತ ಜರ್ಜರಿತನಾಗಿದ್ದಾನೆ.

    ಇದರಿಂದ ದಿಕ್ಕು ತೋಚದಂತಾದ ರೈತ ರಘುನಾಥರಡ್ಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರನ್ನು ಸಂರ್ಪಸಿದಾಗ, ‘ಇಡೀ ದೇಶವೇ ಲಾಕ್​ಡೌನ್ ವ್ಯವಸ್ಥೆಯಿಂದ ತತ್ತರಿಸುತ್ತಿದ್ದು, ತಾವು ಕಷ್ಟಪಟ್ಟು ಉತ್ತಮ ಗುಣಮಟ್ಟದ ಬಂಪರ್ ಬೆಳೆ ತೆಗೆದಿದ್ದೀರಿ. ನಿಮ್ಮದೇ ಸ್ವಂತ ಟ್ರ್ಯಾಕ್ಟರ್ ಇದೆ. ಊರುರು ತಿರುಗಿ ಮಾರಾಟ ಮಾಡಲು ಅನುಮತಿ ಕೊಡಿಸುತ್ತೇನೆ. ಅದರಿಂದ ತಾವು ಲಾಭ ಗಳಿಸಬಹುದು’ ಎಂದು ನೀಡಿದ ಸಲಹೆ ಮೇರೆಗೆ ರೈತ ಬಾಳೆ ಬೆಳೆ ಕಟಾವ್ ಮಾಡಿ ಯಾವುದೇ ಔಷಧಗಳ ಬಳಕೆ ಇಲ್ಲದೇ ನೈಸರ್ಗಿಕವಾಗಿ ಮಾಗಿದ ರಸಭರಿತ ಬಾಳೆಹಣ್ಣನ್ನು ಟ್ರ್ಯಾಕ್ಟರ್​ನಲ್ಲಿ ಹಾಕಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಡಜನ್​ಗೆ 15 ರಿಂದ 20 ರೂ. ರವರೆಗೆ ನಿತ್ಯ 4-5 ಕ್ವಿಂಟಾಲ್ ಬಾಳೆ ಹಣ್ಣು ಮಾರಿ ಉತ್ತಮ ಆದಾಯ ಗಳಿಕೆಯ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

    ಸೈನಿಕನಾಗಿ ದೇಶಸೇವೆ ಸಲ್ಲಿಸಿ ನಿವೃತ್ತಿ ನಂತರ ಭೂತಾಯಿಯ ಸೇವೆಗೆ ಅಣಿಯಾಗಿರುವ ರೈತ ರಘುನಾಥರಡ್ಡಿ ಕಳೆದೈದು ವರ್ಷದ ಹಿಂದೆ ಬಂಪರ್ ಪಪ್ಪಾಯಿ ಬೆಳೆದು ಕೃಷಿ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯಡಿ ವಿಶೇಷ ಪ್ರೋತ್ಸಾಹಧನ ಪಡೆದು ಈಗ ಬಾಳೆ ಬೆಳೆಯಲ್ಲೂ ಸೈ ಎನಿಸಿಕೊಂಡಿರುವುದು ಅವರ ಸತತ ಪರಿಶ್ರಮಕ್ಕೆ ಸಾಕ್ಸಿಯಾಗಿದೆ.

    ತೋಟಗಾರಿಕೆ ಅಧಿಕಾರಿಗಳ ಸಹಕಾರದಿಂದ ಸ್ವಂತ ವಾಹನದ ಮೂಲಕ ಊರೂರು ಸುತ್ತಿ ಮಾರುವ ಅವಕಾಶ ದೊರೆಯಿತು. ನಿತ್ಯ 3-4 ಜನಕ್ಕೆ ಉದ್ಯೋಗ ನೀಡುವ ಜೊತೆಗೆ 4-5 ಕ್ವಿಂಟಾಲ್ ಹಣ್ಣು ಸಲೀಸಾಗಿ ಮಾರುತ್ತಿದ್ದೇನೆ. ಇದರಿಂದ ಉತ್ತಮ ಲಾಭ ಬರುತ್ತಿದೆ. ಒಟ್ಟಾರೆ ಬೆಳೆದ ಬೆಳೆಯಿಂದ 8 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಬೆಳೆ ಕಟಾವ್ ಆದಾಗ ಗೋವಾ, ಮುಂಬೈ, ಬೆಂಗಳೂರಿನಿಂದ ಬಂದು ಖರೀದಿ ಮಾಡಿ ಕೊಂಡೊಯ್ಯತ್ತಿದ್ದರು. ಆದರೆ, ಸಧ್ಯಕ್ಕೆ ಪಕ್ಕದ ಹಳ್ಳಿಗಳೇ ನನಗೆ ದೊಡ್ಡ ನಗರಗಳಾಗಿವೆ.

    | ರಘುನಾಥರಡ್ಡಿ ಶೆಟರಡ್ಡಿ, ರೈತ

    ಲಾಕ್​ಡೌನ್ ವ್ಯವಸ್ಥೆಯಲ್ಲಿ ಸರ್ಕಾರ ರೈತರು ಬೆಳೆದ ಯಾವುದೇ ಬೆಳೆ ಮಾರಾಟಕ್ಕೆ ಅವಕಾಶ ನೀಡಿದ್ದು, ಖರೀದಿಗೂ ಮುಂದಾಗಿದೆ. ಆದರೆ, ರೈತರು ಕಷ್ಟುಪಟ್ಟು ಬೆಳೆದ ಬೆಳೆ ನಾಶಕ್ಕೆ ಮನಸ್ಸು ಮಾಡದೇ ಪರ್ಯಾಯ ವ್ಯವಸ್ಥೆಗೆ ಮುಂದಾದರೆ ತಮ್ಮ ಸಹಾಯ ಸಹಕಾರವಿದೆ. ತಮ್ಮ ಗ್ರಾಮದ ಸುತ್ತಮುತ್ತಲೂ ಸಂಚರಿಸಿ ಮಾರಿದರೆ ಉತ್ತಮ ಲಾಭ ಸಿಗುತ್ತದೆ

    | ಸುರೇಶ ಕುಂಬಾರ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts