More

    ತೋಟಗಾರಿಕೆ ಬೆಳೆಗಳಿಗೆ ಗ್ರಹಣ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕೆ ಬೆಳೆಗಳ ಸಾಗಾಟಕ್ಕೆ ಆಡಳಿತ ಅನುಮತಿ ಕಲ್ಪಿಸಿದರೂ ಖರೀದಿಸುವವರೇ ಇಲ್ಲದ ಕಾರಣ ಕೃಷಿ ಉತ್ಪನ್ನ ಸಾಗಾಟ ಮಾಡಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ.

    ಬಾಳೆ, ಅನಾನಸ್, ಕಲ್ಲಂಗಡಿ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಗಳು. ಕಟಾವಿಗೆ ಬಂದಿರುವ ಬೆಳೆಗಳು ಗದ್ದೆಯಲ್ಲೇ ಕೊಳೆಯುತ್ತಿರುವುದನ್ನು ರೈತರು ಗಮನಕ್ಕೆ ತಂದಾಗ ಜಿಲ್ಲಾಡಳಿತ, ಹಾಪ್​ಕಾಮ್ಸ್, ಎಪಿಎಂಸಿ, ಖರೀದಿದಾರರು ಮತ್ತು ಬೆಳೆಗಾರರ ಸಭೆ ನಡೆಸಿ, ಮಾರುಕಟ್ಟೆ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ, ಜಿಲ್ಲೆ, ಹೊರ ಜಿಲ್ಲೆಗಳಿಗೆ ವಾಹನ ಸಾಗಾಟಕ್ಕೆ ಅನುಮತಿ ನೀಡಿದೆ. ಆದರೆ, ಲಾಕ್ ಡೌನ್ ಇರುವ ಕಾರಣ, ಜನರು ಮನೆಯಿಂದ ಹೊರಬರುತ್ತಿಲ್ಲ. ರಸ್ತೆ ಬದಿಯ ಮಾರಾಟ ಸಂಪೂರ್ಣ ನಿಷೇಧವಾಗಿದೆ. ಹೀಗಾಗಿ, ರೈತರು ಕಷ್ಟಪಟ್ಟು ಬೆಳೆಸಿದ ಹಣ್ಣುಗಳಿಗೆ ಬೇಡಿಕೆಯಿಲ್ಲದ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ತೊಡಗಿಸಿದ ಬಂಡವಾಳವೂ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.

    ಜನವರಿಯಿಂದ ಆರಂಭವಾಗಿರುವ ಅನಾನಸ್ ಕೊಯ್ಲು ಜೂನ್​ವರೆಗೂ ನಡೆಯುತ್ತದೆ. ದಿನಕ್ಕೆ ಸರಾಸರಿ 100 ಟನ್ ಹಣ್ಣು ಕೊಯ್ಲಿಗೆ ಸಿಗುತ್ತದೆ. ಅನಾನಸ್​ಗೆ ಮುಖ್ಯ ಮಾರುಕಟ್ಟೆಯಾಗಿರುವ ದೆಹಲಿ, ಪಂಜಾಬ್​ನಲ್ಲಿ ಬೇಡಿಕೆ ಗಣನೀಯವಾಗಿ ತಗ್ಗಿದೆ. ಸೋಮವಾರ ಅಲ್ಲಿನ ಮಾರುಕಟ್ಟೆ ಪ್ರಮುಖರನ್ನು ಸಂರ್ಪಸಲಾಗಿದ್ದು, ಅವರು ಅಸ್ಸಾಂನಿಂದ ಕಡಿಮೆ ಬೆಲೆಗೆ ಸಿಗುವ ಹಣ್ಣನ್ನು ಖರೀದಿಸುತ್ತಿದ್ದಾರೆ. ಬೆಳೆಗಾರರು ಹೇಳುವಂತೆ ಇಲ್ಲಿಂದ ಅನಾನಸ್ ಸಾಗಾಟ ಮಾಡಲು ಕೆ.ಜಿ. ಯೊಂದಕ್ಕೆ ಸರಾಸರಿ 6 ರಿಂದ 7 ರೂ. ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಇದೇ ದರಕ್ಕೆ ಹಣ್ಣು ಮಾರಾಟವಾಗುತ್ತಿದೆ.

    ಬನವಾಸಿಯಲ್ಲಿರುವ ಎರಡು ಹಾಗೂ ಸಿದ್ದಾಪುರ ಒಂದು ಅನಾನಸ್ ಸಂಸ್ಕರಣಾ ಫ್ಯಾಕ್ಟರಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಇದರಿಂದ ದಿನಕ್ಕೆ 50 ಟನ್​ನಷ್ಟು ಮಾತ್ರ ಅನಾನಸ್ ಸಂಸ್ಕರಿಸಬಹುದು. ಕರಾವಳಿಯಲ್ಲಿ ಹೆಚ್ಚಿರುವ ಕಲ್ಲಂಗಡಿ ಅರ್ಧದಷ್ಟು ಕಟಾವು ಆಗಿದೆ. ಕಾರವಾರದ ಕಲ್ಲಂಗಡಿ ಹಣ್ಣನ್ನು ಗೋವಾ, ಕೇರಳಕ್ಕೆ ಸಾಗಾಟ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಕಲ್ಲಂಗಡಿ ಕೆ.ಜಿ.ಯೊಂದಕ್ಕೆ 10ರಿಂದ 12 ರೂ. ಇದ್ದ ದರ, ಈಗ 4ರಿಂದ 5 ರೂ.ಕ್ಕೆ ಕುಸಿದಿದೆ. ಬನವಾಸಿಯಲ್ಲಿ ಬೆಳೆದಿರುವ ಕಲ್ಲಂಗಡಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಲಾದರೂ ಹೆಚ್ಚಿನ ಪರಿಣಾಮ ಇಲ್ಲ. | ಬಸವನ ಗೌಡ- ಕಲ್ಲಂಗಡಿ ವ್ಯಾಪಾರಿ

    ಬಾಳೆಕಾಯಿ ವರ್ಷವಿಡೀ ಬೆಳೆಯುವ ಬೆಳೆ. ದಿನಕ್ಕೆ 50,60 ಟನ್ ಕಟಾವಿಗೆ ಬರುತ್ತದೆ. ಸ್ಥಳೀಯವಾಗಿ ಐದು ಟನ್ ಮಾರಾಟವಾದರೆ, ಉಳಿದ ಬೆಳೆ ಗೋವಾ, ಕೇರಳಕ್ಕೆ ಹೋಗುತ್ತದೆ. ಗ್ರಾಹಕರಿಗೆ ಮನೆಮನೆ ತಲುಪಿಸಲು ಕೊಂಡಿಯಾಗಿ ಕೆಲಸ ಮಾಡುವಂತೆ ಹಾಪ್​ಕಾಮ್ಸ್​ಗೆ ಸೂಚಿಸಲಾಗಿದೆ. ತೋಟಗಾರಿಕೆ ಬೆಳೆಗಳ ಖರೀದಿ, ಮಾರಾಟ ಸಂಬಂಧ ರಾಜ್ಯ ಸರ್ಕಾರ ಆಸಕ್ತಿ ವಹಿಸಿದ್ದು, ಪ್ರತಿ ದಿನದ ಪ್ರಗತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. – ಬಿ.ಪಿ.ಸತೀಶ- ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts