More

    ತೊಟ್ಟಿಲು ತೂಗುವ ಕೈ ದೇಶ ಆಳಬೇಕು

    ಎನ್.ಆರ್.ಪುರ: ತೊಟ್ಟಿಲು ತೂಗುವ ಕೈಗಳು ರಾಜ್ಯ, ದೇಶವನ್ನು ಆಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿದರು.

    ಬೈಪಾಸ್ ರಸ್ತೆಯಲ್ಲಿ ಶನಿವಾರ ಬಿಜೆಪಿ ಕಸಬಾ ಹೋಬಳಿ ಮಹಿಳಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರಿಗೆ ಪ್ರಧಾನಿ ಮೋದಿ ಅವರನ್ನು ನಿಂದಿಸುವುದೇ ಕೆಲಸ. ವಿಧವಾವೇತನ ಹೆಚ್ಚು ಮಾಡಲು ಮೋದಿ ಬರಬೇಕಾಯಿತು. ನೂತನ ಶಿಕ್ಷಣ ನೀತಿ ಜಾರಿಯಾಗಿದೆ. ಬಡವರಿಗೆ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಸಿದ್ದರಾಮಯ್ಯ 3 ರೂ.ಗೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರು.

    ದೇಶದ 130 ಕೋಟಿ ಜನರ ಪೈಕಿ 85 ಕೋಟಿ ಜನರಿಗೆ ಉಚಿತ ಕರೊನಾ ಲಸಿಕೆ ನೀಡಲಾಯಿತು. ಇಂದು ಭಾರತ ಬೇಡುವ ಸರ್ಕಾರವಾಗಿಲ್ಲ. ಬೇರೆ ದೇಶಗಳಿಗೆ ನೀಡುವ ಸರ್ಕಾರವಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಿ.ಎನ್.ಜೀವರಾಜ್ ಈ ಚುನಾವಣೆಯಲ್ಲಿ ಗೆದ್ದು ಮತ್ತೆ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

    ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ತೇಜಸ್ವಿನಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1991ರ ವೇಳೆಗೆ ನಾನು ಬಿಜೆಪಿಯಿಂದ ಸಭೆ ಮಾಡಬೇಕಾದರೆ 20 ಜನರನ್ನು ಸೇರಿಸುವುದು ಕಷ್ಟವಾಗುತ್ತಿತ್ತು. ಇಂದು ಹೋಬಳಿ ಮಹಿಳಾ ಸಮಾವೇಶದಲ್ಲಿ 3ರಿಂದ 4 ಸಾವಿರ ಮಹಿಳೆಯರು ಸೇರಿ ಜಿಲ್ಲಾ ಮಟ್ಟದ ಸಮಾವೇಶದಂತೆ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

    ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಜಿಲ್ಲೆಯ ಮೊದಲ ಬಿಜೆಪಿ ಮಹಿಳಾ ಸಮಾವೇಶ ಯಶಸ್ವಿಯಾಗಿದೆ. ಮೋದಿ ಸರ್ಕಾರ ರಾಷ್ಟ್ರಪತಿ ಸ್ಥಾನಕ್ಕೆ ಮಹಿಳೆಗೆ ಅವಕಾಶ ನೀಡಿದೆ. ಕೇಂದ್ರ ಸಂಪುಟದಲ್ಲಿ ಎಂಟು ಮಹಿಳಾ ಸಚಿವೆಯರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಎಲ್ಲ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಸಮಾವೇಶಕ್ಕೂ ಮುನ್ನ ಕರಿಬಸವೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು. ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ತಾಲೂಕು ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ರಶ್ಮಿ ದಯಾನಂದ್, ತಾಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೋಹನ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಸುಧಾ ಆಚಾರ್, ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್, ಮುಖಂಡರಾದ ಪದ್ಮಾವತಿ, ಕೋಕಿಲಮ್ಮ, ಶ್ರುತಿ, ಸುಧಾ, ಭಾಗ್ಯಾ, ರಜನಿ, ಸುಚಿತಾ, ಶೈಲಾ, ಸುಜಾತಾ, ರೇಖಾ ಮಂಜುನಾಥ್, ಪೂಜಾ, ರೀನಾ ಬೆನ್ನಿ, ಸವಿತಾ ರತ್ನಾಕರ್, ಕೆಸವಿ ಮಂಜುನಾಥ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts