More

    ತೆರೆಯುತ್ತಿಲ್ಲ ರಾಗದಲೆಗಳ ಬೀಗ!

    ಮರಿದೇವ ಹೂಗಾರ ಹುಬ್ಬಳ್ಳಿ

    ಬ್ರಾಹ್ಮಿ ಮುಹೂರ್ತದಿಂದ ಗೋಧೂಳಿ ಸಮಯ ದಾಟಿದರೂ ಸಂಗೀತ ರಾಗವೇಳುತ್ತಿದ್ದ ಇಲ್ಲಿಯ ಉಣಕಲ್​ನ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಮಾದರಿ ಸಂಗೀತ ಶಿಕ್ಷಣ ಕೇಂದ್ರದಲ್ಲೀಗ ‘ಮೌನರಾಗ’ ಆವರಿಸಿದೆ. ಏಕೆಂದರೆ, ರಾಗದಲೆಗಳಿಗೆ ಕರೊನಾ ಹಾಕಿದ ಬೀಗ ಇನ್ನೂ ಹಾಗೇ ಇದೆ!

    ಯುವ ಪೀಳಿಗೆಗೆ ಹಿಂದುಸ್ತಾನಿ ಸಂಗೀತ ಕಲಿಸಬೇಕು. ಉತ್ಕೃಷ್ಟ ಪರಂಪರೆ ಮುಂದುವರಿಯಬೇಕೆಂಬ ಉದ್ದೇಶದಿಂದ 8 ವರ್ಷದ ಹಿಂದೆ ಈ ಕೇಂದ್ರ ಆರಂಭವಾಗಿದೆ. ದೇಶದ ಏಕೈಕ ಸರ್ಕಾರಿ ಸಂಗೀತ ಗುರುಕುಲ ಇದು. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ದಿಲ್ಲಿ ಸೇರಿ ವಿವಿಧ ರಾಜ್ಯಗಳ 30 ಶಿಷ್ಯ ವರ್ಗ ಇಲ್ಲಿ ರಾಗ, ತಾಳ, ಆಲಾಪ, ವಾದ್ಯ ಕಲಿಯುತ್ತಿದ್ದರು.

    ದೇಶ-ವಿದೇಶಗಳಲ್ಲಿ ಖ್ಯಾತಿವೆತ್ತ ಪಂ. ಗಣಪತಿ ಭಟ್ ಹಾಸಣಗಿ, ಪಂ. ಕೈವಲ್ಯಕುಮಾರ ಗುರವ, ಪುಣೆಯ ಪಂ. ಕೇದಾರ ನಾರಾಯಣ ಬೋಡಸ್, ಮುಂಬೈನ ಪಂ. ವಿಜಯಾ ಜಾಧವ ಘಟಲೆವಾರ್ ಅವರು ನಿತ್ಯ ಶಿಷ್ಯ ವರ್ಗಕ್ಕೆ ಸಂಗೀತದ ರಸದೌತಣ ನೀಡುತ್ತಿದ್ದರು. ಶ್ರೀಧರ ಮಾಂಡ್ರೆ, ವಿಠ್ಠಲ ಅವಧಾನಿ ಹಾಗೂ ಶ್ರೀಹರಿ ದಿಗ್ಗಾವಿ ತಬಲಾ ಸಾಥ್ ನೀಡುತ್ತಿದ್ದರು.

    ಬೆಳಗಿನ ಜಾವ ತೋಡಿ, ಭೈರವ ರಾಗ, ಮಧ್ಯಾಹ್ನ ಸಾರಂಗ ಪ್ರಕಾರ, ಸಂಜೆ ವೇಳೆ ಮಾರ್ವಾ, ಪೂರಿಯಾ ಧನಶ್ರೀ ಪಾಠ ಮಾಡುವುದು, ಗುರುಗಳಿಗೆ ಎಷ್ಟು ಹೊತ್ತಿಗೆ ಲಹರಿ ಬರುತ್ತದೋ ಆಗ ಶಿಷ್ಯರನ್ನು ಕರೆದು ಒಮ್ಮೊಮ್ಮೆ 2-3 ಗಂಟೆವರೆಗೆ ಪಾಠ ಮಾಡಿ, ರಾಗಗಳ ಸೂಕ್ಷ್ಮಗಳನ್ನು ಪ್ರಸ್ತುತಿಯ ಮೂಲಕ ಮನದಟ್ಟು ಮಾಡುತ್ತಿದ್ದರು. ನಿತ್ಯ ನಡೆಯುತ್ತಿದ್ದ ಸಂಗೀತ ಪಾಠ ಗುರುಕುಲದ ವಾತಾವರಣದಲ್ಲಿ ನಾದ-ನಿನಾದ, ಆಲಾಪಗಳು ಅಲೆ ಅಲೆಯೆಬ್ಬಿಸುತ್ತಿತ್ತು. ಇದೆಲ್ಲವನ್ನೂ ಕರೊನಾ ಕಸಿದುಕೊಂಡಿದೆ.

    ಹೋಟೆಲ್, ಬಸ್, ರೈಲ್ವೆ, ವಿಮಾನ ಸಂಚಾರ ಆರಂಭವಾಗಿದೆ. ಪರಸ್ಪರ ಅಂತರ ಕಾಯ್ದುಕೊಂಡು ಸಂಗೀತ ಶಾಲೆ ಆರಂಭಿಸಬಹುದು ಎಂಬುದು ಸಂಗೀತ ವಿದ್ವಾಂಸರ ಅಭಿಪ್ರಾಯ. ಕೇಂದ್ರದ ಆಡಳಿತಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಜಿಲ್ಲಾಧಿಕಾರಿ ಮನವೊಲಿಸುವಲ್ಲಿ ಟ್ರಸ್ಟ್ ಸಫಲವಾಗಿಲ್ಲ. ಹಾಗಾಗಿಯೇ ಸಂಗೀತವಿಲ್ಲಿ ಕರೊನಾಕ್ಕೆ ಹೆದರಿ ಮೂಲೆ ಸೇರಿದೆ. ಇಲ್ಲಿಯ ವಿದ್ಯಾರ್ಥಿಗಳು, ತಮ್ಮ ಕಲಿಕೆಯಿಂದ ವರ್ಷದ ಹಿಂದಕ್ಕೆ ಜಾರುವಂತೆ ಮಾಡಿದೆ.

    ಸಂಬಳ, ವಿದ್ಯುತ್, ನೀರಿಗಷ್ಟೇ ವೆಚ್ಚ: ಈ ಗುರುಕುಲಕ್ಕೆ ಪೂರೈಕೆಯಾಗುವ ವಿದ್ಯುತ್ ಹಾಗೂ ನೀರಿಗೆ ಮಾತ್ರ ಈಗ ಖರ್ಚು ಭರಿಸಲಾಗುತ್ತಿದೆ. ಸಂಗೀತ ಶಿಕ್ಷಕರಿಗೆ ಸಂಬಳ ನೀಡಲಾಗುತ್ತಿದೆ. ಯಾರೂ ಉಳಿದುಕೊಳ್ಳದೆ ಇರುವುದರಿಂದ ಊಟೋಪಚಾರ, ವಸತಿ ಖರ್ಚು ಇಲ್ಲ. ವಾರ್ಷಿಕ ಅಂದಾಜು ವೆಚ್ಚ 80ರಿಂದ 90 ಲಕ್ಷ ರೂ. ಇದೆ ಎನ್ನಲಾಗುತ್ತಿದೆ. ಆದರೆ ಕರೊನಾ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಗೀತ ತರಗತಿಗಳು ಬಂದ್ ಆಗಿದ್ದು, ಖರ್ಚಿನಲ್ಲಿ ಎಷ್ಟು ಉಳಿತಾಯವಾಗಿದೆಯೊ ಗೊತ್ತಿಲ್ಲ.

    ಕಮರಿದ ಬದುಕು: ಹುಬ್ಬಳ್ಳಿ-ಧಾರವಾಡ ಸಂಗೀತ ಹಾಗೂ ಕಲೆಗಳ ತಪೋಭೂಮಿ. ಕರೊನಾ ಹಿನ್ನೆಲೆಯಲ್ಲಿ ಸಂಗೀತ, ನಾಟ್ಯ, ರಂಗಭೂಮಿ ಕಲೆ ಕಮರಿದೆ. ಜನರು ಒಂದೆಡೆ ಸೇರುವಂತಿಲ್ಲ. ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸುವಂತಿಲ್ಲ. ಹಾಗಾಗಿ ಕಲಾವಿದರ ಬದುಕು ತೊಳಲಾಟದಲ್ಲಿದೆ.

    ಪರಸ್ಪರ ಅಂತರ ಕಾಯ್ದುಕೊಳ್ಳಲಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆಯೂ ಇರುತ್ತದೆ. ಈ ಸಂಗೀತ ಶಾಲೆ ಬೇರೆ ಶಾಲೆಗಳಂತೆ ಅಲ್ಲ. ಇಲ್ಲಿರುವ ಶಿಷ್ಯರು ಹೊರಗಡೆ ಹೋಗುವುದಿಲ್ಲ. 7 ತಿಂಗಳಿಂದ ಸಂಗೀತ ಪಾಠಗಳು ಬಂದ್ ಆಗಿವೆ. ಸಂಗೀತ ಶಾಲೆ ಆರಂಭಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲು ತಿಳಿಸಲಾಗಿದೆ.

    | ಪಂ. ಕೈವಲ್ಯಕುಮಾರ ಗುರವ, ಕೇಂದ್ರದ ಸಂಗೀತ ಶಿಕ್ಷಕ

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಮಾವಳಿಗಳನ್ನು ಸೂಚಿಸಿವೆ. ಅದನ್ನೇ ಪಾಲಿಸಲಾಗುತ್ತಿದೆ. ಸಂಗೀತವೂ ಒಂದು ಶಿಕ್ಷಣ. ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಬರುತ್ತಿರುವುದರಿಂದ ನಿಯಮಾವಳಿ ಅನ್ವಯವಾಗುತ್ತಿದೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೆ ಸಂಗೀತ ಶಾಲೆಯ ತರಗತಿಗಳನ್ನು ಆರಂಭಿಸಲಾಗುವುದು.

    |ಶಶಿಧರ ಮಾಡ್ಯಾಳ, ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts