More

    ತೆರೆದುಕೊಂಡವು ದೇಗುಲ, ಪ್ರವಾಸಿ ತಾಣಗಳು

    ಅನ್‌ಲಾಕ್ ಆದ ಲಾಕ್‌ಡೌನ್, ಚಾಮುಂಡಿ ದೇವಿ ದರ್ಶನ ಪಡೆದ ಭಕ್ತರು

    ಮೈಸೂರು: ನಗರದ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ ಮತ್ತು ಪ್ರಸಿದ್ಧ ಧಾರ್ಮಿಕ ಕೇಂದ್ರ ಚಾಮುಂಡೇಶ್ವರಿ ದೇಗುಲದ ಬಾಗಿಲು ಸಾರ್ವಜನಿಕರಿಗೆ ಸೋಮವಾರ ತೆರೆದುಕೊಂಡಿತು. ಆದರೆ, ಮೊದಲಿನಷ್ಟು ಜನರೂ ಇರಲಿಲ್ಲ. ಸಂಭ್ರಮ-ಸಡಗರವೂ ಇರಲಿಲ್ಲ…!
    ಕರೊನಾ ಲಾಕ್‌ಡೌನ್‌ನಿಂದಾಗಿ ಮಾರ್ಚ್ 22ರಿಂದಲೇ ಈ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೋಮವಾರದಿಂದ ಅನ್‌ಲಾಕ್ ಶುರುವಾಗಿದ್ದು, ಇದರಿಂದಾಗಿ 79 ದಿನಗಳ ಬಳಿಕ ಜನರಿಗೆ ಇಲ್ಲಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಗರಿಗೆದರಿದೆ. ಆದರೆ, ಯಥಾಸ್ಥಿತಿ ಬರಲು ಇನ್ನು ತಿಂಗಳಗಟ್ಟಲೇ ಸಮಯ ಹಿಡಿಯಲಿದೆ.
    ಚಾಮುಂಡಿ ದರ್ಶನ ಪಡೆದ ಭಕ್ತರು: ಚಾಮುಂಡಿಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡಿದೇವಿಯ ದರ್ಶನ ಪಡೆದು ಭಕ್ತರು ಪುಳಕಿತರಾದರು. ಈ ಕ್ಷಣಕ್ಕಾಗಿ ಕಳೆದ ಎರಡುವರೆ ತಿಂಗಳಿಂದ ಕಾತುರದಿಂದ ಕಾಯುತ್ತಿದ್ದರು. ದೇವಸ್ಥಾನದ ಬಾಗಿಲು ತೆರೆದು ಬೆಳಗ್ಗೆ 7.30ರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಮೊದಲಿಗೆ 15 ಜನರನ್ನು ಒಳಗೆ ಹೋಗಿ ದೇವರ ದರ್ಶನ ನೀಡಲಾಯಿತು. ಅವರು ಹೊರಗೆ ಬಂದ ಬಳಿಕ ಮತ್ತೆ 15 ಜನರನ್ನು ಒಳಗೆ ಬಿಡಲಾಯಿತು.
    ಸರ್ಕಾರಿ ಮಾರ್ಗಸೂಚಿ ಅನ್ವಯ ದೇವರ ದರ್ಶನ ಹೊರತುಪಡಿಸಿ ಧಾರ್ಮಿಕ ಸೇವೆಗಳು ಇರಲಿಲ್ಲ. ಜತೆಗೆ ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳಿಗೆ ನಿರ್ಬಂಧ ಹೇರಲಾಗಿತ್ತು. ಭಕ್ತರಿಗೆ ತೀರ್ಥ, ಪ್ರಸಾದ ನೀಡಲಿಲ್ಲ. ಆದರೆ, ಕರೊನಾ ಭಯ ಆವರಿಸಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಸುಳಿವು ಇರಲಿಲ್ಲ. ಪ್ರತಿ ಸೋಮವಾರ ಇಲ್ಲಿಗೆ ಭೇಟಿ ನೀಡುವವರು ಮಾತ್ರ ಕಾಣಿಸಿಕೊಂಡರು.
    ಜಿಟಿಡಿ ನಿಯಮ ಉಲ್ಲಂಘನೆ: ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇತರರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. 65 ವರ್ಷ ಮೇಲ್ಪಟ್ಟರಿಗೆ ಪ್ರವೇಶ ನಿಬರ್ಂಧಿಸಲಾಗಿದೆ. ಆದರೆ, 75 ವರ್ಷದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಪ್ರವೇಶ ನೀಡುವ ಮೂಲಕ ಮಾರ್ಗಸೂಚಿಯನ್ನು ಉಲ್ಲಂಘಿಸಲಾಯಿತು. ಸಚಿವರ ದೇವರ ದರ್ಶನದ ವೇಳೆ ನೂಕು ನುಗ್ಗಲು ಕಂಡು ಬಂತು. ಜನಪ್ರತಿನಿಧಿಗಳು, ಅಧಿಕಾರಿಗಳು ದೈಹಿಕ ಅಂತರ ಮರೆತರು.
    ಮೃಗಾಲಯ ವೀಕ್ಷಣೆಗೆ ಮುಕ್ತ: ಎರಡೂವರೆ ತಿಂಗಳಿಗೂ ಅಧಿಕ ಸಮಯದಿಂದ ಮುಚ್ಚಿದ್ದ ಚಾಮರಾಜೇಂದ್ರ ಮೃಗಾಲಯ ಕೂಡ ಸಾರ್ವಜನಿಕರಿಗೆ ಮುಕ್ತವಾಯಿತು. ಪ್ರವೇಶದ ದ್ವಾರಕ್ಕೆ ತಳಿರು ತೋರಣದಿಂದ ಸಿಂಗಾರ ಮಾಡಿ ಪ್ರವಾಸಿಗರನ್ನು ಸ್ವಾಗತಿಸಲಾಯಿತು. ಇಲ್ಲಿ ಕೂಡ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು. ಬೆಳಗ್ಗೆ 8.30ರಿಂದ ಸಂಜೆ 5.30ರ ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಇಲ್ಲೂ ನಿರೀಕ್ಷಿತ ಮಟ್ಟದಲ್ಲಿ ಜನರು ಇರಲಿಲ್ಲ. ಮಧ್ಯಾಹ್ನ 1ಗಂಟೆ ವರೆಗೆ ಕೇವಲ 110 ಟಿಕೆಟ್‌ಗಳು ಮಾತ್ರ ಖರೀದಿಯಾಗಿದ್ದವು. ಇದರಲ್ಲಿ ಸಚಿವರು ಖರೀದಿ ಮಾಡಿರುವ 50 ಟಿಕೆಟ್‌ಗಳು ಸೇರಿದ್ದವು. ಜನರ ಗಜಿಬಿಜಿ ಇಲ್ಲದ ಕಾರಣಕ್ಕೆ ಪ್ರಶಾಂತ ವಾತಾವರಣ ಕಂಡುಬಂತು. ಇದರಿಂದ ಪಕ್ಷಗಳ ಚಿಲಿಪಿಲಿ, ವನ್ಯಜೀವಿಗಳ ಕಲರವ ಕಳೆಗಟ್ಟಿತ್ತು.


    ಮೃಗಾಲಯ ಪುನರಾರಂಭಕ್ಕೆ ಚಾಲನೆ
    ಇಲ್ಲಿಯ ಪ್ರವೇಶದ್ವಾರ ಬಳಿಯ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಸಚಿವ ಎಸ್.ಟಿ.ಸೋಮಶೇಖರ್, ಸಂಸದೆ ಸುಮಲತಾ ಅಂಬರೀಷ್ ಮೃಗಾಲಯ ಪುನರಾರಂಭಕ್ಕೆ ಚಾಲನೆ ನೀಡಿದರು. ಡಾ.ರಾಜ್‌ಕುಮಾರ್, ಅಂಬರೀಷ್, ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಕ್ರಮವಾಗಿ ಆನೆ, ಆಫ್ರಿಕನ್ ಆನೆ, ಸಿಂಹವನ್ನು ಒಂದು ವರ್ಷದ ಮಟ್ಟಿಗೆ ಸಚಿವರು ದತ್ತು ಪಡೆದರು.


    ಸಚಿವ ಹೆಸರಿನ ಫಲಕ: ಲಾಕ್‌ಡೌನ್ ಸಂಕಷ್ಟದ ಕಾಲದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಮೃಗಾಲಯಕ್ಕೆ 3.23 ಕೋಟಿ ರೂ. ದೇಣಿಗೆ ಸಂಗ್ರಹಿಸಿಕೊಟ್ಟಿದ್ದು, ಇದರ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾಲಯದ ಮುಖ್ಯ ಪ್ರವೇಶದ್ವಾರದ ಎದುರು ಫಲಕ ನಿರ್ಮಾಣ ಮಾಡಲಾಗಿದೆ. ಅದನ್ನು ಅನಾವರಣ ಮಾಡಲಾಯಿತು. ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆ 40 ಲಕ್ಷ ರೂ. ಚೆಕ್ ಅನ್ನು ಸಂಘಟನೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ನೀಡಿದರು.
    ಜಿರಾಫೆ ಮರಿಗಳಿಗೆ ನಾಮಕರಣ
    ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಆದ್ಯ ಯದುವೀರ ಹಾಗೂ ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಹೊಸ ಆವರಣವನ್ನು ಅನಾವರಣಗೊಳಿಸಲಾಯಿತು. ಇಲ್ಲಿ ಪ್ರಸ್ತುತ ‘ತಾರಾ’ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನಕ್ಕೆ 10 ಸಾವಿರ ಪ್ರವಾಸಿಗರು ಭೇಟಿ ಕೊಡಲು ಸದ್ಯದ ಪರಿಸ್ಥಿತಿಯಲ್ಲಿ ಆಗಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ವಾರದ ರಜಾ ದಿನವಾದ ಮಂಗಳವಾರ(ಜೂ.9) ಕೂಡ ಮೃಗಾಲಯ, ಕಾರಂಜಿಕೆರೆ ಪ್ರಕೃತಿ ಉದ್ಯಾನವು ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ ಎಂದು ಮೃಗಾಲಯದ ಪ್ರಕರಣ ತಿಳಿಸಿದೆ.
    ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಅರಮನೆ ಕೂಡ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಕರೊನಾ ತಡೆಯಲು ಇಲ್ಲೂ ಸುರಕ್ಷತಾ ಕ್ರಮ ಪಾಲನೆ ಮಾಡಲಾಯಿತು. ಪ್ರವಾಸಿಗರ ದೇಹದ ಉಷ್ಣಾಂಶ ಪರೀಕ್ಷೆ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಬಳಕೆಗೆ ಸೂಚಿಸಲಾಯಿತು. ಮಾಸ್ಕ್ ಧರಿಸಿದ ಪ್ರವಾಸಿಗರನ್ನು ಮಾತ್ರ ಒಳಗೆ ಬಿಡಲಾಯಿತು. ಪ್ರತಿ ವ್ಯಕ್ತಿಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಯಿತು. ಆದರೆ, ಪ್ರವಾಸಿಗರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಇಲ್ಲೂ ಕೂಡ ಜನರ ಸಂಖ್ಯೆ ಬಹಳ ಕಡಿಮೆ ಇತ್ತು.

    ತೆರೆದುಕೊಂಡವು ದೇಗುಲ, ಪ್ರವಾಸಿ ತಾಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts