More

    ತೂಬಗೆರೆ ಲಕ್ಷ್ಮೀ ವೆಂಕಟರಮಣನ ಮಹಿಮೆ ಅಪಾರ, ತಿರುಪತಿಯಿಂದ ತಂದ ವಿಗ್ರಹ, ಪುರಾತನ ದೇಗುಲ

    ಶಿವು ತೂಬಗೆರೆ
    ತೂಬಗೆರೆ ಹೋಬಳಿಯ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇಗುಲದಂತೆ ತೂಬಗೆರೆ ಗ್ರಾಮದಲ್ಲೇ ಇರುವ ಪ್ರಸನ್ನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇಗುಲ ಪುರಾತನ ಪುಣ್ಯ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಘಾಟಿ ಸುಬ್ರಹ್ಮಣ್ಯನ ದರ್ಶನ ಪಡೆವ ಭಕ್ತರು ವಾಪಸ್ ಮರಳುವಾಗ ಈ ದೇವರ ದರ್ಶನ ಪಡೆಯುವುದು ಸಾಮಾನ್ಯವಾಗಿದೆ.

    ಗ್ರಾಮವು ಪ್ರಾಚೀನ ಹಾಗೂ ಪುರಾತತ್ವ ಸಂಶೋಧನೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಈ ಗ್ರಾಮದ ಸುತ್ತಮುತ್ತಲಿನ ಶಾಸನಗಳು, ಮಾಸ್ತಿಕಲ್ಲು, ವೀರಗಲ್ಲುಗಳು ಗ್ರಾಮಸ್ಥರು ಪೂಜಿಸಿಕೊಂಡು ಬಂದಿರುವ ಗ್ರಾಮದೇವತೆಗಳು, ಇಲ್ಲಿನ ಪರಿಸರ, ಭೌಗೋಳಿಕ ಲಕ್ಷಣ, ಅರಣ್ಯ ಸಂಪತ್ತು ಇವೆಲ್ಲವೂ ಇಲ್ಲಿನ ಪಾರಂಪರಿಕ ಇತಿಹಾಸವನ್ನು ಸಾರಿ ಹೇಳುತ್ತಿವೆ. ಗ್ರಾಮವು ನಂದಿಬೆಟ್ಟದ ತಪ್ಪಲಿಗೆ ಸಮೀಪದಲ್ಲಿರುವುದರಿಂದ ನಂದಿಗಿರಿ ಗ್ರಾಮಕ್ಕೆ ಬರುವ ಪ್ರವಾಸಿಗರು ತೂಬಗೆರೆಗೂ ಭೇಟಿ ನೀಡುವುದು ವಾಡಿಕೆ.

    ಒಂದು ಕಾಲಕ್ಕೆ ಸಿದ್ದರಿಂದಲೂ, ಸಾಧಕರಿಂದಲೂ ಆವೃತವಾದ ಪ್ರದೇಶವೆಂದು ತೂಬಗೆರೆ ಕರೆಯಲ್ಪಡುತ್ತಿದೆ, ಏಕೆಂದರೆ ಈ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಊರ್ಧ್ವರೇತ ಚಿಹ್ನೆಯಿರುವ ಶಿವಲಿಂಗಗಳೂ, ಪುರಾತನ ಶಿಲ್ಪಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಇಲ್ಲಿನ ಕೆಲವು ಧ್ಯಾನಸ್ಥ ಮಂಟಪಗಳು ಒಂದು ಕಾಲಕ್ಕೆ ಈ ಗ್ರಾಮ ಸಾಧಕರ ನೆಲೆ ಬೀಡಾಗಿತ್ತು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ದೇವಾಲಯ ಆಧ್ಯಾತ್ಮಿಕವಾಗಿಯೂ, ಪಾರಂಪರಿಕ ದೃಷ್ಟಿಯಿಂದಲೂ ಭಕ್ತರ ಗಮನ ಸೆಳೆಯುತ್ತಿದೆ. ಈ ದೇವಾಲಯದಲ್ಲಿ ಬಹಳ ಹಿಂದಿನಿಂದಲೂ ಸ್ಥಂಭದಲ್ಲಿ ಮೂಡಿರುವ ನರಸಿಂಹಸ್ವಾಮಿ ಮೂರ್ತಿಯ ಆರಾಧನೆಗೆ ಸಾವಿರಾರು ಭಕ್ತರು ಮುಗಿಬೀಳುತ್ತಾರೆ. ಘಾಟಿ ಕ್ಷೇತ್ರಕ್ಕೆ ಸಮೀಪದಲ್ಲಿರುವ ದೇವಾಲಯದಲ್ಲಿ ಸ್ಥಂಭೋದ್ಪವನಾದ ನರಸಿಂಹನ ಆರಾಧನೆ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಇದಕ್ಕೆ ಗರ್ಭಗುಡಿಯಲ್ಲಿ ಈಗಲೂ ನರಸಿಂಹ ಸ್ಥಂಭವಿರುವುದೇ ಸಾಕ್ಷಿ, ಶತಮಾನಗಳಿಂದಲೂ ನರಸಿಂಹಸ್ವಾಮಿ ಆರಾಧನೆಗೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಿದ್ದಾರೆ.

    ವಿಜಯನಗರ ಕುರುಹು: ದೇವಾಲಯದ ಪ್ರಭಾವ ಮನಗಂಡು 15-16 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಮಹಾಮಂತ್ರಿ ತಿಮ್ಮರಸು ವಂಶಸ್ಥರಾದ ತಿಮ್ಮಪ್ಪತಿಗಳಪ್ಪ ದೇಶಪಾಂಡೆ ಎಂಬುವವರನ್ನು ಮೈಸೂರು ಮಹಾರಾಜರು ಆಧರಿಸಿ, ಈ  ಗ್ರಾಮಕ್ಕೆ ಬಳುವಳಿಯಾಗಿ ಜಮೀನುಗಳನ್ನು ಕೊಟ್ಟು ಸುತ್ತಮುತ್ತಲಿನ ಗ್ರಾಮದ ಜವಾಬ್ದಾರಿ ವಹಿಸಿದರು ಎಂಬ ಪ್ರತೀತಿ ಇದೆ. ಇಂದಿಗೂ ಅವರಿಗೆ ಕಟ್ಟೆಮನೆಯವರೆಂದು ಗ್ರಾಮಸ್ಥರು ಆದರಿಸಿ ಗೌರವಿಸುತ್ತಾರೆ.

    ತಿರುಪತಿಯಿಂದ ಬಂದ ವಿಗ್ರಹ: ಬಹಳ ಹಿಂದೆ ಗ್ರಾಮದಲ್ಲಿ ಕ್ಷಾಮ ಮತ್ತಿತರ ಸಮಸ್ಯೆ ತಲೆದೋರಿತ್ತು. ಈ ವೇಳೆ ಇಲ್ಲಿನ ಕೆಲ ವರ್ತಕರು ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ವಾಪಸ್ ಮರಳುತ್ತಿದ್ದರು. ಈ ವೇಳೆ ಅಲ್ಲಿ ವೆಂಕಟೇಶ್ವರ ಸ್ವಾಮಿ ವಿಗ್ರಹವೊಂದು ದಿವ್ಯದರ್ಶನ ನೀಡಿತು. ಅದನ್ನು ಖರೀದಿಸಿ ತಂದು ಗ್ರಾಮದ ದೇಗುಲದಲ್ಲಿನ ನರಸಿಂಹಸ್ವಾಮಿ ದೇವರ ಮುಂದೆ ಪ್ರತಿಷ್ಠಾಪಿಸಿದ ಬಳಿಕ ಗ್ರಾಮದಲ್ಲಿ ತಲೆದೋರಿದ್ದ ಸಮಸ್ಯೆಗಳು ಪರಿಹಾರವಾದವು ಎಂಬ ಪ್ರತೀತಿ ಇದೆ.

    ಏಳುನೂರು ವರ್ಷದ ಇತಿಹಾಸ ಹೊಂದಿರುವ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇಗುಲಕ್ಕೆ ತನ್ನದೇ ಐತಿಹ್ಯವಿದೆ, ತಿರುಪತಿ ತಿರುಮಲದಿಂದ ವಿಗ್ರಹ ತಂದು ಪ್ರತಿಷ್ಠಾಪಿಸಲಾಯಿತು ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ಉಗ್ರ ನರಸಿಂಹಸ್ವಾಮಿ ನೆಲೆಸಿರುವುದರಿಂದ ಗ್ರಾಮದಲ್ಲಿ ಯಾವುದೇ ಕೇಡಾಗುವುದಿಲ್ಲ ಎಂಬುದು ನಂಬಿಕೆ.
    ನಾಗಣ್ಣ, ಅರ್ಚಕ

    ಮಾರ್ಗ: ಬೆಂಗಳೂರಿನಿಂದ 65 ಕಿ.ಮೀ ದೂರವಿದೆ, ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ದಾಟಿ ಘಾಟಿ ಮಹಾದ್ವಾರ ಪ್ರವೇಶಿಸಿ 8 ಕಿಮೀ ಬಳಿಕ ಬಲಕ್ಕೆ ತಿರುವು ಪಡೆದು 4 ಕಿಮೀ ಸಾಗಿದರೆ ದೇಗುಲ ದರ್ಶನವಾಗುತ್ತದೆ, ನೆಲಮಂಗಲದಿಂದ ಟಿಬಿ ಸರ್ಕಲ್ ಮೂಲಕ ಇದೇ ದಾರಿಯಲ್ಲಿ ಸಾಗಬೇಕು, ನಂದಿಗಿರಿಧಾಮದಿಂದ 3 ಕಿಮೀ ಅಂತರವಲ್ಲದೆ, ಗೌರಿಬಿದನೂರು ಮಾರ್ಗದಿಂದ ದೊಡ್ಡಬಳ್ಳಾಪುರ ಮಾರ್ಗಮಧ್ಯೆ ಎಡಕ್ಕೆ ತಿರುಗಿ ಘಾಟಿ ರಸ್ತೆಯಲ್ಲಿ ಸಾಗಬೇಕು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts