More

    ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಅವಮಾನ

    ಬೆಳಗಾವಿ: ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂದಿನ ಪ್ರಧಾನಂತ್ರಿ ಇಂದಿರಾ ಗಾಂಧಿ ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜೂ. 25ರಂದು ತುರ್ತು ಪರಿಸ್ಥಿತಿ ಸಂದರ್ಭಕ್ಕೆ 46 ವರ್ಷ ಪೂರ್ಣಗೊಂಡ ನಿಮಿತ್ತ ಬೆಳಗಾವಿ ಮಹಾನಗರ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರಾಳ ದಿನ ಆಚರಣೆ ಬಳಿಕ ಮಾತನಾಡಿದ ಅವರು, ಈ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು ಎಂದರು.

    ಕೆಲವು ತುರ್ತು ಸಂದರ್ಭದಲ್ಲಿ ಮಾತ್ರ ಇದನ್ನು ಹೇರಲು ಅವಕಾಶ ಇದೆ. ಆದರೆ, ಅದ್ಯಾವ ನಿಯಮಗಳೂ ಪಾಲನೆ ಮಾಡದೆ ಕೇವಲ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದಲೇ ತುರ್ತು ಪರಿಸ್ಥಿತಿ ಹೇರಿರುವುದು ಅವರ ಮನಸ್ಥಿತಿ ಹೇಗಿತ್ತು ಎನ್ನುವುದನ್ನು ತಿಳಿಸುತ್ತದೆ. ಅಸಂಖ್ಯಾತ ಸತ್ಯಾಗ್ರಹಿಗಳು ಜೈಲಿನ ಕತ್ತಲ ಕೋಣೆಯಲ್ಲಿ ಹಲವಾರು ದಿನ ಕಳೆಯಬೇಕಾದ ಸ್ಥಿತಿ ಬಂದಿತು. ಪತ್ರಿಕೆಗಳ ಮುದ್ರಣಾಲಯಕ್ಕೆ ಬೀಗ ಹಾಕಲಾಗಿತ್ತು. ನಾಗರಿಕರ ಮೂಲ ಹಕ್ಕುಗಳನ್ನು ಕಿತ್ತುಕೊಂಡು ಸಂಸತ್ ಮತ್ತು ನ್ಯಾಯಾಲಯವನ್ನು ಮೂಕಪ್ರೇಕ್ಷಕರನ್ನಾಗಿ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳ ಆಡಳಿತ ಎಂದೇ ಪರಿಗಣಿಸಲಾಗುತ್ತದೆ ಎಂದರು.

    ಸಂಸದೆ ಮಂಗಲ ಅಂಗಡಿ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರಿಂದ ಅಭಿವ್ಯಕ್ತಿ ಸ್ವಾತಂತ್ರೃ, ಪತ್ರಿಕಾ ಸ್ವಾತಂತ್ರೃವನ್ನೂ ಕಿತ್ತುಕೊಳ್ಳಲಾಗಿತ್ತು. ಅದೆಲ್ಲವನ್ನೂ ಪ್ರಶ್ನಿಸಿದ ಕಾರಣಕ್ಕಾಗಿ ಹೋರಾಟಗಾರರು ಜೈಲು ಸೇರುವಂತಾಗಿತ್ತು ಎಂದರು. ಇದೇ ಸಂದರ್ಭದಲ್ಲಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಮಹಾತ್ಮರ ತ್ಯಾಗಕ್ಕೆ ನಮನ ಸಲ್ಲಿಸಲಾಯಿತು. ಮಹಾನಗರ ಬಿಜೆಪಿ ಅಧ್ಯಕ್ಷ ಶಶಿಕಾಂತ ಪಾಟೀಲ, ಪ್ರವೀಣ ಕರೋಶಿ, ಹನುಮಂತ ಕೊಂಗಾಳಿ, ವಿಜಯ ಕದಂ, ಮಾಧ್ಯಮ ಸಲಹೆಗಾರ ಶರದ್ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts