More

    ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದವರಿಗೆ ಸನ್ಮಾನ

    ಹುಬ್ಬಳ್ಳಿ: ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ಹೋರಾಡಿ ಜೈಲು ಸೇರಿದ್ದ ಇಲ್ಲಿಯ ಕೇಶ್ವಾಪುರದ ಅಚ್ಯುತ ಲಿಮಯೆ ಹಾಗೂ ಹನುಮಂತರಾವ್ ಇನಾಮದಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಬುಧವಾರ ಸನ್ಮಾನಿಸಿದರು.

    ಜನಸಂಘದ ಸಂಸ್ಥಾಪಕ ಡಾ. ಶಾಮಾಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಇಬ್ಬರೂ ಹೋರಾಟಗಾರರ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಸಚಿವ ಜಗದೀಶ ಶೆಟ್ಟರ್, ತಾವು ಸಹ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದಾಗಿ ನೆನಪಿಸಿಕೊಂಡರು.

    ಸನ್ಮಾನ ಸ್ವೀಕರಿಸಿದ ಅಚ್ಯುತ ಲಿಮಯೆ ಮಾತನಾಡಿ, ‘ಡಿಐಆರ್ ಕಾನೂನಿನಡಿ ನನ್ನನ್ನು ಸೇರಿ ಒಟ್ಟು 14 ಜನರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ್ದರು. ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರೂ ನನ್ನೊಂದಿಗೆ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿದ್ದರು. ಒಟ್ಟು 38 ದಿನ ಜೈಲಿನಲ್ಲಿದ್ದೆವು. ಪಿಯುಸಿ ವಿದ್ಯಾರ್ಥಿಯಾಗಿದ್ದ ನಾನು, ಕಾಲೇಜು ಪ್ರಾರಂಭಗೊಳ್ಳುವ ಮುಂಚೆಯೇ ಬೆಳಗ್ಗೆ ಕಾಲೇಜಿನ ಗೋಡೆ ಮೇಲೆ ತುರ್ತು ಪರಿಸ್ಥಿತಿ ಹೋಗಲಿ ಎಂದು ಬರೆದು ಬರುತ್ತಿದ್ದೆ’ ಎಂದು ಸ್ಮರಿಸಿಕೊಂಡರು.

    ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸಿಕೊಂಡ ಹನುಮಂತರಾವ್ ಇನಾಮದಾರ, ‘ಮೀಸಾ ಕಾನೂನಿನಡಿ 18 ತಿಂಗಳು ಬಂಧನದಲ್ಲಿದ್ದೆ. ಬೆಂಗಳೂರು ಕಾರಾಗೃಹದಲ್ಲಿ ನನ್ನೊಂದಿಗೆ ಎಲ್.ಕೆ. ಅಡ್ವಾಣಿ, ಮಧು ದಂಡವತೆ, ಎಚ್.ಡಿ. ದೇವೆಗೌಡ ಅವರೂ ಇದ್ದರು’ ಎಂದು ಹೇಳಿದರು.

    ಹುಡಾ ಅಧ್ಯಕ್ಷ ನಾಗೇಶ ಕಲಬರ್ಗಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಮಲ್ಲಿಕಾರ್ಜುನ ಸಾವಕಾರ, ಬೀರಪ್ಪ ಖಂಡೇಕಾರ, ಸಂಕಲ್ಪ ಶೆಟ್ಟರ್, ಮಹೇಂದ್ರ ಕೌತಾಳ, ಭಾರತಿ ಟಪಾಲ, ಮೇನಕಾ ಹುರಳಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts