More

    ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಸೆರೆ!

    ತುಮಕೂರು: ಹೇಮಾವತಿ ನಾಲೆಯ ಟನಲ್‌ನಲ್ಲಿ ಅಡಗಿದ್ದ ಚಿರತೆಯನ್ನು 5 ಗಂಟೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

    ಹೆಬ್ಬೂರು ಹೋಬಳಿ ಅರೆಯೂರು ಗ್ರಾಪಂ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯದ ಕೆರೆ ಏರಿ ಬಳಿಯ ಟನಲ್‌ನಲ್ಲಿ ಅಡಗಿದ್ದ 2 ವರ್ಷದ ಗಂಡು ಚಿರತೆಯನ್ನು ಶುಕ್ರವಾರ ಸಂಜೆ 7 ರಿಂದ ರಾತ್ರಿ 12ರವರೆಗೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕೆರೆ ಏರಿಗೆ ಹೊಂದಿಕೊಂಡಿದ್ದ ಟನಲ್ ಬಹಳ ಕಿರಿದಾಗಿದ್ದರಿಂದ ಅರಿವಳಿಕೆ ಬಳಸಲು ಸಾಧ್ಯವಿರಲಿಲ್ಲ. ಹಾಗಾಗಿ, ಒಂದು ಕೊನೆಯಲ್ಲಿ ಬೋನು ಇಟ್ಟು ಮತ್ತೊಂದು ತುದಿಯಲ್ಲಿ ಪಟಾಕಿ ಸಿಡಿಸಿ, ಜೋರು ಸದ್ದು ಮಾಡಿದರೂ ಚಿರತೆ ಅಲುಗಾಡದೆ ಕುಳಿತಿತ್ತು. 5 ಗಂಟೆಗಳ ದೀರ್ಘ ಕಾರ್ಯಾಚರಣೆ ಬಳಿಕ ಕೊನೆಗೆ ಚಿರತೆ ಮತ್ತೊಂದು ತುದಿಯಿಂದ ಹೊರಬಂದು ಬೋನಿನಲ್ಲಿ ಸಿಕ್ಕಿಬಿದ್ದಿತು.

    ಬಂಡೀಪುರಕ್ಕೆ ರವಾನೆ: ಸುರಕ್ಷಿತವಾಗಿ ಸೆರೆಹಿಡಿಯಲಾದ ಚಿರತೆಯನ್ನು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೂಲೆಹೊಳೆ ಅರಣ್ಯಕ್ಕೆ ರವಾನಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಕಾರ‌್ಯಾಚರಣೆಯಲ್ಲಿ ಅರಿವಳಿಕೆ ತಜ್ಞ ಡಾ.ಮುರಳಿ ಹಾಗೂ ತಂಡ, ತುಮಕೂರು ವಲಯ ಅರಣ್ಯಾಧಿಕಾರಿ ಎಚ್.ಎಲ್.ನಟರಾಜ್, ಕುಣಿಗಲ್ ಆರ್‌ಎಫ್‌ಒ ಮಂಜುನಾಥ್ ಹಾಗೂ ಗುಬ್ಬಿ ಆರ್‌ಎಫ್‌ಒ ರವಿ ಹಾಗೂ ಸಿಬ್ಬಂದಿ ಇದ್ದರು.

    ಒಂದೂವರೆ ತಿಂಗಳಲ್ಲಿ 7 ಚಿರತೆ ಸೆರೆ!: ನರಭಕ್ಷಕ ಚಿರತೆ ಭೀತಿಯಿಂದ ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳ ಜನ ಕಂಗೆಟ್ಟಿದ್ದು ಒಂದೂವರೆ ತಿಂಗಳಲ್ಲಿ ಈ ಮೂರು ತಾಲೂಕುಗಳಲ್ಲಿ ಒಟ್ಟು 7 ಚಿರತೆ ಸೆರೆಹಿಡಿಯಲಾಗಿದೆ. ತುಮಕೂರು ವಲಯದಲ್ಲೇ 5 ಚಿರತೆಗಳನ್ನು ಸೆರೆಹಿಡಿಯಲಾಗಿದೆ.

    ಆನೆ ಕಾರ್ಯಾಚರಣೆ ಸ್ಥಗಿತ?: 1 ತಿಂಗಳಿನಿಂದ ಚಿರತೆ ಸೆರೆಗೆ ಆನೆ ಕಾರ್ಯಾಚರಣೆ ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ 4 ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಕಾರ‌್ಯಾಚರಣೆ ಯಶಸ್ಸು ನೀಡದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. 1 ವಾರದಲ್ಲಿ ಮಾನವ ಹತ್ಯೆ ನಡೆದ ಪ್ರದೇಶದ 10 ಕಿ.ಮೀ., ವ್ಯಾಪ್ತಿಯಲ್ಲೇ 1 ಗಂಡು, 1 ಹೆಣ್ಣು ಚಿರತೆ ಸೆರೆಸಿಕ್ಕಿದ್ದು ಇವು ನರಭಕ್ಷಕ ಚಿರತೆ ಎಂಬ ಬಲವಾದ ಅನುಮಾನಗಳು ಇಲಾಖೆ ಸಿಬ್ಬಂದಿಗೆ ಇದೆ. ಹಾಗಾಗಿ, ಆನೆ ಕಾರ್ಯಾಚರಣೆ ಕೈಬಿಡುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts