More

    ತುಂಡು ನೆಲಕ್ಕಾಗಿ ಹೋರಾಟ

    ಪ್ರಕಾಶ್ ಮಂಜೇಶ್ವರ, ಮಂಗಳೂರು
    ನಗರದ ಹೊರವಲಯದ ಕುಡುಪು ಗ್ರಾಮದಲ್ಲಿ ಜೋಪಡಿ ನಿರ್ಮಿಸಿಕೊಂಡು ನಾಲ್ಕು ತಲೆಮಾರುಗಳಿಂದ ಜೀವನ ನಡೆಸುತ್ತಿರುವ ಈ ನೆಲದ ಮೂಲ ನಿವಾಸಿ 32 ಕೊರಗ ಕುಟುಂಬಗಳಿಗೆ ಹಕ್ಕುಪತ್ರ ಇನ್ನೂ ಮರೀಚಿಕೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ ಈ ಪ್ರದೇಶದ ಸರ್ವೇ ನಂಬರ್ 85/1ರಲ್ಲಿರುವ 8.94 ಎಕರೆ ಭೂಮಿಯನ್ನು ನಿವೇಶನ ರಹಿತ 40 ಕೊರಗ ಆದಿವಾಸಿ ಕುಟುಂಬಗಳಿಗೆ ವಸತಿ ನಿರ್ಮಿಸಲು(ಠರಾವು ಸಂಖ್ಯೆ 76/2018- 19) 2018ರಲ್ಲಿ ಪಾಲಿಕೆ ನಿರ್ಣಯ ಅಂಗೀಕರಿಸಿದರೂ ಯೋಜನೆ ಜಾರಿಗೊಳಿಸುವಲ್ಲಿ ಈ ಪ್ರದೇಶದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ.
    ಕೊರಗರು ವಾಸಿಸುತ್ತಿರುವ ಈ ಪ್ರದೇಶ ಬಫರ್ ರೆನ್(ನಿರ್ದಿಷ್ಟ ಯೋಜನೆ ಉದ್ದೇಶಕ್ಕಾಗಿ ಮೀಸಲಿರಿಸಿದ ಜಮೀನಿನ ಸರಹದ್ದಿನಲ್ಲಿ ಯೋಜನೆಯ ಅಡ್ಡ ಪರಿಣಾಮ ನಿಯಂತ್ರಿಸಲು ಪೂರಕ ಚಟುವಟಿಕೆಗಳಿಗೆ ಕಾದಿರಿಸಿದ ಭೂಮಿ) ವ್ಯಾಪ್ತಿಯಲ್ಲಿದೆ. ಇದನ್ನು ವಾಸಕ್ಕೆ ಕೊಡಲು ಸಾಧ್ಯವಿಲ್ಲ ಎನ್ನುವುದು ಇಲಾಖೆಯ ಹಿರಿಯ ಅಧಿಕಾರಿಗಳು ಈಗ ನೀಡುತ್ತಿರುವ ಕಾರಣ.

    ಆದರೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ಆಸುಪಾಸಿನಲ್ಲೇ ಮಂಗಳಾನಗರ, ದೇವಿನಗರ, ಬಸವಲಿಂಗಪ್ಪ ನಗರ, ಸಂತೋಷ್ ನಗರ, ಮಂಗಳಾ ಜ್ಯೋತಿ ಸಂಸ್ಥೆ ಇದ್ದು, ಕೊರಗರು ವಾಸಿಸುವ ಈ ಜಮೀನಿನ ಮೇಲೆ ಮಾತ್ರ ಯಾಕೆ ಕಣ್ಣು ಎನ್ನುವುದು ಕೊರಗಜ್ಜ ಸೇವಾ ಟ್ರಸ್ಟ್ ಮುಖಂಡರ ಪ್ರಶ್ನೆ.

    ಅಧಿಕಾರಿಗಳ ಮನಸ್ಥಿತಿ ಬಗ್ಗೆ ಆಕ್ಷೇಪ: ಸಮೀಪದ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ಬಳಿಕ ಪಕ್ಕದ ಬಂಗಾರದ ಬೆಲೆಬಾಳುವ ಭೂಮಿಯನ್ನು ಇವರಿಗೆ (ಕೊರಗರಿಗೆ) ಯಾಕೆ ಕೊಡಬೇಕು. ಎಲ್ಲಾದರೂ ಒಂದು ಮೂಲೆಯಲ್ಲಿ ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿ ಸ್ವಲ್ಪ ಜಾಗ ಕೊಟ್ಟು ಕೈತೊಳೆದುಕೊಂಡರಾಯಿತು ಎನ್ನುವ ಮನಃಸ್ಥಿತಿ ಅಧಿಕಾರಿಗಳದ್ದು ಎನ್ನುವ ಆರೋಪ ಇಲ್ಲಿ ವಾಸಿಸುವ ಕೊರಗರದು. 1918ರಲ್ಲಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯರು ಕೊರಗ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತ ಸಂಸ್ಥೆಗೆ ನಿರ್ದೇಶಿಸಿದ್ದರು. ನಗರವಾಸಿಗಳಿಗೆ ಹಕ್ಕುಪತ್ರ ಪಡೆಯಲು ಅವಕಾಶವಿರುವ 94ಸಿಸಿಯಲ್ಲಿ ಯೂ ಬಾಧಿತ ಕುಟುಂಬಗಳು ಅರ್ಜಿ ಸಲ್ಲಿಸಿದ್ದರೂ, ಪ್ರಯೋಜನವಾಗಿಲ್ಲ.

    ದಾನಪತ್ರ ಮೂಲಕ ನೀಡಿದ್ದ ಜಮೀನು: ದಲಿತೋದ್ಧಾರಕ ಕುದ್ಮುಲ್ ರಂಗ ರಾವ್ ಅವರಿಂದ ಪ್ರೇರಣೆ ಪಡೆದ ವೆಂಕೋಜಿ ರಾವ್ ಕೊರಗ ಕುಟುಂಬಗಳಿಗೆ ದಾನಪತ್ರ ಮೂಲಕ 1912ರಲ್ಲಿ ಈ ಜಮೀನನ್ನು ಕೊಟ್ಟಿದ್ದರು. 1942ರಲ್ಲಿ ಮುನಿಸಿಪಾಲಿಟಿಯವರು ಸಮರ್ಪಕ ಮಾಹಿತಿ ನೀಡದೆ ಕೊರಗ ಕುಟುಂಬದ ಹಿರಿಯರಿಂದ ಸಹಿ ಪಡೆದು ಜಮೀನನ್ನು ಮುನಿಸಿಪಾಲಿಟಿ ಹೆಸರಿಗೆ ಬರೆಸಿಕೊಂಡಿದ್ದರು ಎನ್ನುವ ಟ್ರಸ್ಟ್ ಪ್ರತಿನಿಧಿಗಳು ಅಡಂಗಲ್ಲಿನಲ್ಲಿ ಇರುವ ವೆಂಕೋಜಿ ರಾವ್ ಹೆಸರನ್ನು ಉಲ್ಲೇಖಿಸುತ್ತಾರೆ.

    ಅಧಿಕಾರಿಗಳು ಮನಸ್ಸು ಬದಲಾಯಿಸಬೇಕು. ಹಲವು ತಲೆಮಾರುಗಳಿಂದ ನಮ್ಮವರು ವಾಸಿಸುತ್ತಿರುವ ಭೂಮಿಯಿದು. 1970 ರಿಂದ ಭೂಮಿಯ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದೇ ಪ್ರದೇಶದಲ್ಲಿ ವಾಸಿಸಲು ನಮಗೆ ಹಕ್ಕುಪತ್ರ ಬೇಕು.
    ಲಕ್ಷ್ಮಣ ವಾಮಂಜೂರು ಅಧ್ಯಕ್ಷ, ಕೊರಗಜ್ಜ ಸೇವಾ ಟ್ರಸ್ಟ್

    ವಾಸ್ತವ್ಯಕ್ಕಾಗಿ ಸೂಚಿತ ಪ್ರದೇಶದ ಹಕ್ಕುಪತ್ರ ಒದಗಿಸಲು ಅಡ್ಡಿಯಾಗುವ ಕೆಲವು ಅಂಶಗಳಿವೆ. ಈ ಪ್ರದೇಶವನ್ನು ‘ಅಭಿವೃದ್ಧಿಪಡಿಸಲು ಸಾಧ್ಯವಾಗದ ಪ್ರದೇಶ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಘೋಷಿಸಿದೆ. ಹತ್ತಿರದಲ್ಲೇ ಪಚ್ಚನಾಡಿ ಡಂಪಿಂಗ್ ಯಾರ್ಡ್ ಇರುವುದು ಕೂಡ ಅಡ್ಡಿಯಾಗಿದೆ.
    ಸಂತೋಷ್ ಕುಮಾರ್ ಉಪ ಆಯುಕ್ತರು(ಆಡಳಿತ), ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts