More

    ತಾಳೆಯಾಗುತ್ತಿಲ್ಲ 2500 ರೈತರ ದಾಖಲೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ವರುಣನ ಆರ್ಭಟಕ್ಕೆ ಸಂಪೂರ್ಣ ಬೆಳೆ ಕಳೆದುಕೊಂಡ ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸರ್ಕಾರ ಬೆಳೆ ಹಾನಿಗೆ ಪರಿಹಾರ ಕೊಡುವುದಾಗಿ ಘೊಷಿಸಿ, ಸಮೀಕ್ಷಾ ಕಾರ್ಯ ಕೈಗೊಂಡಿದೆ. ಆದರೆ, ರೈತರ ದಾಖಲೆಗಳು ಮಿಸ್​ವ್ಯಾಚ್ ಆದ ಕಾರಣ 2500ಕ್ಕೂ ಅಧಿಕ ರೈತರು ಪರಿಹಾರದಿಂದ ವಂಚಿತರಾಗುವಂತಾಗಿದೆ.

    ತಾಲೂಕಿನ ಕುಪ್ಪೇಲೂರ, ತುಮ್ಮಿನಕಟ್ಟಿ, ಹಲಗೇರಿ, ಅಂತರವಳ್ಳಿ, ನಿಟ್ಟೂರು, ಕೋಣನತಲೆ ಸೇರಿ ವಿವಿಧ ಗ್ರಾಮಗಳಲ್ಲಿ 2500ಕ್ಕೂ ಅಧಿಕ ರೈತರ ಬೆಳೆ ಹಾನಿ ಪರಿಹಾರದ ಅರ್ಜಿಗಳು ತಿರಸ್ಕೃತಗೊಂಡಿವೆ. ಕಾರಣ ಕೇಳಿದರೆ, ನಿಮ್ಮ ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರುಗಳು ಬೇರೆ ಬೇರೆ ಇವೆ. ಆದ್ದರಿಂದ ಹೆಸರು ಹೊಂದಾಣಿಕೆಯಾಗದ ಕಾರಣ ಅರ್ಜಿ ತಿರಸ್ಕೃತಗೊಂಡಿವೆ ಎಂದು ನಾಡಕಚೇರಿ, ಕಂದಾಯ ಅಧಿಕಾರಿಗಳು ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ.

    ತಾಲೂಕಿನಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬೀನ್ ಸೇರಿ ಕೃಷಿ ಇಲಾಖೆಯ 16,825 ಹೆಕ್ಟೇರ್ ಹಾಗೂ ಬಾಳೆ, ಎಲೆಬಳ್ಳಿ ಸೇರಿ 5 ಸಾವಿರ ಹೆಕ್ಟೇರ್​ನಷ್ಟು ತೋಟಗಾರಿಕೆ ಬೆಳೆ ಬೆಳೆ ಹಾನಿಯಾಗಿದೆ. ರೈತರು ಮೆಕ್ಕೆಜೋಳ, ಹತ್ತಿ ಸೇರಿ ಇತರ ಬೆಳೆ ಬೆಳೆಯಲು ಒಂದು ಎಕರೆಗೆ ಕನಿಷ್ಠ 25 ಸಾವಿರ ರೂ.ವರೆಗೂ ಖರ್ಚು ಮಾಡಿದ್ದಾರೆ. ಸರ್ಕಾರ ಒಂದು ಹೆಕ್ಟೇರ್​ಗೆ 18 ಸಾವಿರ ರೂ.ನಿಂದ 24 ಸಾವಿರ ರೂ.ವರೆಗೆ ಆಯಾ ಬೆಳೆ ಹಾಗೂ ಹಾನಿ ಆಧಾರಿಸಿ ಪರಿಹಾರ ನೀಡುತ್ತಿದೆ. ಆದರೆ, ಅರ್ಜಿಗಳು ತಿರಸ್ಕೃತವಾಗಿದ್ದು, ರೈತರು ಪರಿಹಾರಕ್ಕಾಗಿ ತಹಸೀಲ್ದಾರ್ ಕಚೇರಿ, ಜಿಲ್ಲಾಡಳಿತ ಭವನಕ್ಕೆ ಅಲೆಯುತ್ತಿದ್ದಾರೆ.

    ಬಂದ ಪರಿಹಾರವೂ ಅಲ್ಪಸ್ವಲ್ಪ: ರೈತರಿಗೆ ಸರ್ಕಾರದಿಂದ 2 ಹೆಕ್ಟೇರ್ ಜಮೀನಿಗೆ ಮಾತ್ರ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದೆ. ತಾಲೂಕಿನಲ್ಲಿ ಕೆಲ ರೈತರಿಗೆ 1 ಅಥವಾ 2 ಎಕರೆ ಸಂಪೂರ್ಣ ಹಾನಿಯಾಗಿದ್ದರೂ ಅವರಿಗೆ ಅರ್ಧದಷ್ಟು ಪರಿಹಾರ ಬಂದಿದೆ. 5ರಿಂದ 10 ಎಕರೆ ಹಾನಿಯಾದ ರೈತರಿಗೂ ಕಡ್ಡಾಯವಾಗಿ 2 ಹೆಕ್ಟೇರ್ ಮಾತ್ರ ಪರಿಹಾರ ನೀಡಬೇಕು ಎಂದಿದೆ. ಆದರೆ, ಅಧಿಕಾರಿಗಳು ಅದರಲ್ಲೂ ತಾರತಮ್ಯ ಮಾಡುತ್ತಿದ್ದು, ಕೆಲವರಿಗೆ 15 ಸಾವಿರ ರೂ. ಹಾಕಿದರೆ, ಮತ್ತೊಬ್ಬರಿಗೆ 21 ಸಾವಿರ ರೂ. ಹಾಕಿದ್ದಾರೆ. ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ತಾಲೂಕಿನ ಕುಪ್ಪೇಲೂರ ಗ್ರಾಮದ ರೈತ ಹೇಮರೆಡ್ಡಿ ಮಲ್ಲರೆಡ್ಡಿ ‘ವಿಜಯವಾಣಿ’ ಎದುರು ಆರೋಪಿಸಿದರು.

    ಅತಿವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂಥ ಸಮಯದಲ್ಲಿ ಬೆಳೆ ಹಾನಿ ಪರಿಹಾರ ರೈತರಿಗೆ ತುಸು ಕೈ ಹಿಡಿಯುತ್ತಿತ್ತು. ಆದರೆ, ಅತಿಹೆಚ್ಚು ಅರ್ಜಿಗಳು ತಿರಸ್ಕೃತಗೊಂಡ ಕಾರಣ ರೈತರು ಪರಿಹಾರಕ್ಕಾಗಿ ಅಧಿಕಾರಿ ಗಳನ್ನು ಭೇಟಿಯಾಗಲು ಅಲೆದಾಡುವ ಸ್ಥಿತಿ ನಿರ್ವಣವಾಗಿದೆ. ಬೆಳೆ ಕಳೆದುಕೊಂಡ ಪ್ರತಿಯೊಬ್ಬ ರೈತರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
    ಹನುಮಂತಪ್ಪ ಕಬ್ಬಾರರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಾಣೆಬೆನ್ನೂರ

    ಕಳೆದ ಬಾರಿ ಮಿಸ್​ವ್ಯಾಚ್ ಪ್ರಕರಣಗಳ ರೈತರಿಗೆ ಪರಿಹಾರ ಜಮಾ ಮಾಡಿದ್ದರಿಂದ ಪರಿಹಾರ ಹಣ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಬಂದಿದೆ. ಆದ್ದರಿಂದ ಈ ಬಾರಿ ಮಿಸ್​ವ್ಯಾಚ್ ಪ್ರಕರಣಗಳನ್ನು ತಿರಸ್ಕೃರಿಸಲಾಗಿದೆ. ಆದರೂ ತಿರಸ್ಕೃತವಾಗಿರುವ ಅರ್ಜಿಗಳನ್ನು ಪರಿಶೀಲಿಸಿ ರೈತರ ಸಂಪೂರ್ಣ ದಾಖಲಾತಿಗಳನ್ನು ತೆಗೆದುಕೊಳ್ಳಲಾಗುವುದು. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಎಲ್ಲವೂ ಸರಿಯಿದ್ದಲ್ಲಿ ಅವರಿಗೆ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು.
    ಶಂಕರ ಜಿ.ಎಸ್.ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts