More

    ತಾಳಮದ್ದಳೆಯಲ್ಲಿ ಹೊಡೆದಾಡಿದ ಕಲಾವಿದರು

    ಪಡುಬಿದ್ರಿ: ಇಲ್ಲಿಗೆ ಸಮೀಪದ ಅವರಾಲುಮಟ್ಟುವಿನಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನ ತಾಳಮದ್ದಳೆ ಕೂಟದಲ್ಲಿ ಪಾತ್ರಧಾರಿಗಳು ವೇದಿಕೆಯಲ್ಲಿ ಮಾತು ಮೀರಿ, ಧ್ವನಿವರ್ಧಕದಿಂದ ಹೊಡೆದಾಡಿಕೊಂಡು, ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ರಾಜಿ ಪಂಚಾಯಿತಿ ಮೂಲಕ ಸುಖಾಂತ್ಯಗೊಂಡಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅವರಾಲುಮಟ್ಟು ಮಂದಿರವೊಂದರ ವಾರ್ಷಿಕೋತ್ಸವ ಅಂಗವಾಗಿ ಪ್ರತೀ ವರ್ಷ ಹವ್ಯಾಸಿ ಕಲಾವಿದರಿಂದ ತಾಳಮದ್ದಳೆ ನಡೆಯುತ್ತಿತ್ತು. ಈ ಬಾರಿ ಶುಂಭ ವಧೆ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಶುಂಭ ಮತ್ತು ರಕ್ತ ಬೀಜಾಸುರ ಪಾತ್ರಧಾರಿಗಳಿಬ್ಬರು ತಾಳಮದ್ದಳೆಯ ನಿರ್ಣಾಯಕ ಹಂತದಲ್ಲಿ ಪರಸ್ಪರ ಅವಾಚ್ಯ ಪದಗಳಿಂದ ಬೈದಾಡಿಕೊಂಡು ಕೈಯಲ್ಲಿದ್ದ ಮೈಕ್‌ನಿಂದ ಹೊಡೆದಾಡಿಕೊಂಡ ಪರಿಣಾಮ ಶುಂಭ ಪಾತ್ರಧಾರಿಯ ತಲೆಗೆ ಗಾಯವಾಗಿದೆ. ಉಳಿದವರು ಮಧ್ಯಪ್ರವೇಶ ಮಾಡಿ ಹೊಡೆದಾಟ ನಿಲ್ಲಿಸಿದರು. ಅಷ್ಟಕ್ಕೆ ತಾಳಮದ್ದಳೆ ಮುಕ್ತಾಯ ಕಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿದ್ದು, ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ರಾಜಿ ಪಂಚಾಯಿತಿ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

    ಕ್ಷಮೆ ಕೇಳಿ ತೆರಳಿದ ಕಲಾವಿದ: ಹೊಡೆದಾಟ ಮಾಡಿದ ಕಲಾವಿದರಿಬ್ಬರೂ ನಮ್ಮಲ್ಲಿಗೆ ಪ್ರಥಮ ಬಾರಿ ಬಂದವರು. ಹೊಡೆದಾಟದ ಬಳಿಕ ಪ್ರಸಂಗ ನಿಲ್ಲಿಸಿ ಪ್ರಸಾದ ಹಾಗೂ ಸಂಭಾವನೆ ಪಡೆದುಕೊಂಡು ಕಲಾವಿದರು ತೆರಳಿದ್ದಾರೆ. ಹೊಡೆತ ತಿಂದ ಕಲಾವಿದ ಕ್ಷಮಾಪಣೆ ಕೇಳಿದ್ದಾರೆ. ಪ್ರಕರಣ ಠಾಣೆ ಮೆಟ್ಟಿಲೇರಿದ್ದು ಗಮನಕ್ಕೂ ಬಂದಿಲ್ಲ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts