More

    ತಾಲೂಕು ಆಡಳಿತವೇ ಮನೆ ಬಾಗಿಲಿಗೆ, ಸಮಸ್ಯೆ ಬಗೆಹರಿಸಿಕೊಳ್ಳಲು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಸಲಹೆ

    ನೆಲಮಂಗಲ: ಇಡೀ ತಾಲೂಕು ಆಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಲಾನುಭವಿಗಳು ಪಡೆದುಕೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

    ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲರಬಾಣವಾಡಿಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಯ ತಾಲೂಕುಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಐತಿಹಾಸಿಕ ಮಲ್ಲರಬಾಣವಾಡಿಯಲ್ಲಿ ಬಾಣಗಳನ್ನು ತಯಾರಿಸಲಾಗುತ್ತಿದ್ದಂತೆ ಹಾಗೂ ಮಲ್ಲರು ನೆಲೆಸಿದ್ದರು. ಈ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳಿದ್ದು, ಶೀಘ್ರ ಪರಿಹಾರ ಒದಗಿಸಬೇಕಿದೆ. ರಸ್ತೆ, ಸ್ಮಶಾನ ಒತ್ತುವರಿ ತೆರವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

    ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಗ್ರಾಮವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರತಿ ಮನೆಗೆ ಭೇಟಿ ನೀಡಿರುವ ಕಂದಾಯ, ಗ್ರಾಪಂ ಅಧಿಕಾರಿಗಳು ಸಮಸ್ಯೆಗಳ ಜತೆಗೆ ಸರ್ಕಾರದ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದು, ಆದೇಶ ಪ್ರತಿ ವಿತರಿಸಲಾಗುತ್ತಿದೆ. ಜನರಿಂದ ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಸಮರ್ಪಕ ದಾಖಲೆಗಳು ಇದ್ದಲ್ಲಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

    ಕಣ್ಣೀರಿಟ್ಟ ಅಂಗವಿಕಲ: ಕಾರ್ಯಕ್ರಮದ ಆರಂಭಕ್ಕೂ ಮುನ್ನ ಶಾಸಕರ ಬಳಿ ಆಗಮಿಸಿದ ಅನಾರೋಗ್ಯದಿಂದ ಬಲಗಾಲನ್ನು ಕಳೆದುಕೊಂಡಿರುವ ಗ್ರಾಮದ ನಿವಾಸಿ ಶಿವರಾಜು, ಕುಟುಂಬ ಸಾಕಷ್ಟು ಅರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಸಹಾಯ ಮಾಡುವಂತೆ ಕೈ ಮುಗಿದು ಕಣ್ಣಿರಿಟ್ಟರು.

    ವಿವಿಧ ಇಲಾಖೆ ಮಳಿಗೆಗಳು: ಆರೋಗ್ಯ ಇಲಾಖೆಯಿಂದ ಮಳಿಗೆ ತೆರೆದು ಉಚಿತ ಆರೋಗ್ಯ ತಪಾಸಣೆ ಜತೆಗೆ ಔಷಧ ವಿತರಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತೆರೆಯಲಾಗಿದ್ದ ಪೌಷ್ಟಿಕ ಆಹಾರ ಕುರಿತ ಮಳಿಗೆಯನ್ನು ಶಾಸಕರು ಉದ್ಘಾಟಿಸಿದರು. ಜತೆಗೆ ಪಶುಸಂಗೋಪನ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿತ್ತು.

    ಅರ್ಜಿ ಸ್ವೀಕೃತಿ ಕೇಂದ್ರ ಸ್ಥಾಪನೆ: ಎರಡು ಅರ್ಜಿ ಸ್ವೀಕೃತಿ ಕೇಂದ್ರಗಳನ್ನು ತೆರೆದಿದ್ದು, ಕಂದಾಯ ಇಲಾಖೆ ಸಹಿತ ವಿವಿಧ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸಗಳ ಕುರಿತಾಗಿ ಅರ್ಜಿಗಳನ್ನು ಸ್ವೀಕರಿಸಲಾಯಿತು. ಸ್ಥಳದಲ್ಲೆ ಆಧಾರ್, ಪಡಿತರ ಚೀಟಿ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಡಲಾಯಿತು.

    ಹಕ್ಕು ಪತ್ರ ವಿತರಣೆ: ಶಾಂತಿನಗರ ಗ್ರಾಮದ ಸುಮಾರು 8 ಮಂದಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಯಿತು. ಜತೆಗೆ ವೃದ್ಧಾಪ್ಯ ವೇತನದ ಆದೇಶ ಪ್ರತಿ, ಅಂಗವಿಕಲರಿಗೆ ವೇತನ ಮಂಜೂರಾತಿ ಪ್ರತಿ, ಭಾಗ್ಯಲಕ್ಷ್ಮೀ ಬಾಂಡ್, ಬಿತ್ತನೆ ಬೀಜ ವಿತರಿಸಲಾಯಿತು.

    ಶಾಸಕರಲ್ಲಿ ಮನವಿ: ರಾ.ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಶತಮಾನದ ಸರ್ಕಾರಿ ಶಾಲೆಗೆ ನಿರ್ಮಾಣ ಹಾಗೂ ಸಮುದಾಯ ಭವನಕ್ಕೆ ನಿವೇಶನ ಮೀಸಲಿರಿಸಬೇಕು. ಜತೆಗೆ ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು ಎಂದು ತಾಪಂ ಮಾಜಿ ಸದಸ್ಯ ಎಂ.ವಿ. ರುದ್ರೇಶ್ ಶಾಸಕರಲ್ಲಿ ಮನವಿ ಮಾಡಿದರು.

    ಗ್ರಾಪಂ ಸದಸ್ಯ ಮಹಾಂತೇಶ್, ಮೋಹನ್‌ಗೌಡ, ಮಂಜುನಾಥಯ್ಯ, ವಿರುಪಾಕ್ಷಯ್ಯ, ಶ್ರೀನಿವಾಸ್, ಕವಿತಾ, ಗಂಗಾಮಣಿ, ಶೋಭಾ, ಗಂಗಲಕ್ಷ್ಮಮ್ಮ, ರಾಜಸ್ವ ನಿರೀಕ್ಷಕ ಸುದೀಪ್, ಅಶ್ವತ್ಥ್, ಮುಖಂಡರಾದ ಅನ್ನದಾನಯ್ಯ, ಎಚ್.ಬಿ. ಮಂಜುನಾಥ್, ಕೋಡಪ್ಪನಹಳ್ಳಿ ವೆಂಕಟೇಶ್, ಪಟೇಶ್ ವೆಂಕಟೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts