ಬಾದಾಮಿ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಸಾಧನೆಗಳನ್ನು ನೋಡಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರಿಗೆ ಮತ ನೀಡಬೇಕೆಂದು ಬಿಜೆಪಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ ಬಿ.ಎಸ್. ಸೋಮಶೇಖರ ನೇಕಾರ ಸಮುದಾಯದವರಿಗೆ ಮನವಿ ಮಾಡಿದರು.

ನಗರದ ಕಾನಿಪ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಒಂದೂ ಕಪ್ಪು ಚುಕ್ಕೆಯಿಲ್ಲದೆ ಅಧಿಕಾರ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿರುವುದು, ಒಂದೇ ಕಾನೂನಿನಡಿಯಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದು ಹಾಗೂ ದೇಶದ ಆರ್ಥಿಕ ಸ್ಥಿತಿ 5 ರಿಂದ 3ನೇ ಸ್ಥಾನಕ್ಕೆ ತರುವುದು ಸೇರಿ ಹಲವಾರು ಅಭಿವೃದ್ಧಿ ಕಾರ್ಯಗಳಿಂದ ದೇಶ ಪ್ರಗತಿ ಪಥದತ್ತ ಸಾಗಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ನೇಕಾರ ಸಮುದಾಯದ ಕೆ. ನಾರಾಯಣ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ಹಾಗೂ ವಿ. ಕೇಶವಪ್ರಸಾದ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಪಕ್ಷದಲ್ಲಿ ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಯಡಿಯೂರಪ್ಪ ಸಿಎಂ ಆಗಿದ್ದಾಗ ನೇಕಾರರ ಸಾಲ ಮನ್ನಾ ಮತ್ತು ಸಮ್ಮಾನ್ ಯೋಜನೆ ಹಾಗೂ ದೇವರ ದಾಸಿಮಯ್ಯ ಜಯಂತಿಯನ್ನು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲೂ ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಆಗಿದೆ. ಪ್ರತಿ ಜಿಲ್ಲೆಯಲ್ಲೂ ಟೆಕ್ಸ್‌ಟೈಲ್ ಪಾರ್ಕ್‌ಗಳನ್ನು ತೆರೆಯಲು ಆದೇಶಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲು ಬಾಗಲಕೋಟೆ ಲೋಕಸಭೆ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ನವೀನ್ ಚಿಲ್ಲಾಳ, ನೇಕಾರ ಪ್ರಕೋಷ್ಠ ಸದಸ್ಯ ದಯಾನಂದ ಶೆಟ್ಟಿಗಾರ, ಜಯಶ್ರೀ ದಾಸಮಾನಿ ಹಾಜರಿದ್ದರು.