More

    ತಾಯಿ ಹೆಸರಲ್ಲಿ ಭೂಮಿ ಮಂಜೂರು

    ಬಂಗಾರಪೇಟೆ ಗ್ರಾಮಾಂತರ: ಆಗಿನ ಜಿಲ್ಲಾಧಿಕಾರಿ ಡಿ.ಕೆ.ರವಿ ವಶಪಡಿಸಿಕೊಂಡಿದ್ದ ಕೆರೆ-ಕುಂಟೆ ಒತ್ತುವರಿ ಜಾಗದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಎಸ್‌ಎನ್ ಸಿಟಿಯಲ್ಲಿ ಯಾರೇ ಸೈಟು ಖರೀದಿ ಮಾಡಿದರೂ ಮುಂದಿನ ದಿನಗಳಲ್ಲಿ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯಲ್ಲಿ ಸಂಸದರ ನಿಧಿಯಿಂದ ನಿರ್ಮಾಣ ಮಾಡಿರುವ ರಸ್ತೆಯನ್ನು ಭಾನುವಾರ ವೀಕ್ಷಿಸಿ ಮಾತನಾಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ 8 ವರ್ಷಗಳ ಅಧಿಕಾರದ ಅವಧಿಯ ಆರಂಭದಲ್ಲಿ ಐದು ಎಕರೆ ಜಮೀನು ಖರೀದಿ ಮಾಡಿ ಅದರ ಅಕ್ಕಪಕ್ಕದಲ್ಲಿರುವ ಹತ್ತಾರು ಎಕರೆ ಗೋಮಾಳ ಹಾಗೂ ಖರಾಬು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು.

    ಕೋಲಾರ ಮುಖ್ಯರಸ್ತೆ ಬಳಿ ನಿರ್ಮಾಣ ಮಾಡಿರುವ ಎಸ್‌ಎನ್ ಸಿಟಿಗೆ ಹೋಗುವ ದಾರಿ ಈ ಹಿಂದೆ ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿದ್ದು, ಈ ಜಾಗವನ್ನೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಮಾನು ನಿರ್ಮಾಣ ಮಾಡಿದ್ದಾರೆ. ಇದದೊಳಗೆ ಇದ್ದ ಕೆರೆ-ಕುಂಟೆ ಮಾಯವಾಗಿವೆ. ಈ ಜಮೀನಿನೊಳಗೆ ಕಲ್ಲು ಬಂಡೆಗಳಿಂದ ಕೂಡಿದ್ದ 8 ಎಕರೆ ಜಮೀನನ್ನು ತಾಲೂಕು ದರಖಾಸ್ತು ಸಮಿತಿ ಅಧ್ಯಕ್ಷರಾಗಿರುವ ಶಾಸಕರೇ ತಾಯಿ ಮುನಿಯಮ್ಮ ಹೆಸರಿನಲ್ಲಿ ಮಂಜೂರು ಮಾಡಿಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

    ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಲ್ಲೆಲ್ಲಿ ಲೇಔಟ್, ತೋಟಗಾರಿಕೆ, ಕೃಷಿಗೆ ಸೇರಿದ ಜಮೀನು ಸಂಪಾದನೆ ಮಾಡಿದ್ದಾರೋ ಅಂತಹ ಜಾಗಗಳಲ್ಲಿ ಅಕ್ರಮವಾಗಿಯೇ ಒತ್ತುವರಿ ಮಾಡಿಕೊಂಡಿದ್ದಾರೆ. ಶಾಸಕರ ಅಕ್ರಮಗಳ ಬಗ್ಗೆ ಈಗಾಗಲೆ ಲೋಕಾಯುಕ್ತ, ಹೈಕೋರ್ಟ್, ಎಸಿಬಿ ಸೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ ಹೊರತು, ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ ಎಂದರು.

    ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಾನೂ ರಾಜೀನಾಮೆ ನೀಡುತ್ತೇನೆ. ಇಬ್ಬರೂ ಚುನಾವಣೆಗೆ ಒಟ್ಟಿಗೆ ಹೋಗೋಣ ಎಂದು ಶಾಸಕರಿಗೆ ಸವಾಲು ಹಾಕಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್, ತಾಲೂಕು ಅಧ್ಯಕ್ಷ ರಾಮಾಪುರ ನಾಗೇಶ್, ಮುಖಂಡ ಎಂ.ಪಿ.ಶ್ರೀನಿವಾಸಗೌಡ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಅಮರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts