More

    ತಳವಾರ-ಪರಿವಾರ ಸಮಾಜದವರು ಏನು ಅನ್ಯಾಯ ಮಾಡಿದ್ದಾರೆ?

    ವಿಜಯಪುರ: ವೀರಶೈವ ಲಿಂಗಾಯತ ಹಾಗೂ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆಯೊಂದಿಗೆ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಳವಾರ ಮತ್ತು ಪರಿವಾರ ಸಮುದಾಯ ಸಜ್ಜಾಗಿದೆ.
    ಕಳೆದ ಆರು ತಿಂಗಳಿನಿಂದ ಎಸ್‌ಟಿ ಮೀಸಲಿಗಾಗಿ ಹೋರಾಟ ನಡೆಸುತ್ತಿದ್ದರೂ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಬಲಾಢ್ಯ ಸಮುದಾಯಳಿಗೆ ಮಾತ್ರ ಮನ್ನಣೆ ನೀಡುತ್ತಿದ್ದು ಶೋಷಿತ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ತಳವಾರ-ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದ್ದಾರೆ.
    ಉಪ ಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಭವಿಷ್ಯಕ್ಕಾಗಿ ತರಾತುರಿಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸನ್ಮಾನ್ಯ ಯಡಿಯೂರಪ್ಪನವರೇ ಶೋಷಿತ ಹಿಂದುಳಿದ ತಳವಾರ-ಪರಿವಾರ ಸಮುದಾಯದ ಅಳಲು ಕೇಳಿಸುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
    12 ಲಕ್ಷ ಜನರಿಗೆ ಅನ್ಯಾಯ:
    ತಮ್ಮದೇ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ನೀಡಿ ರಾಜ್ಯ ಪತ್ರ ಹೊರಡಿಸಿದೆ. ಅದಾಗ್ಯೂ ಸ್ಪಷ್ಟೀಕರಣ ಕೇಳುವ ನೆಪದಲ್ಲಿ ರಾಜ್ಯದ 12 ಲಕ್ಷ ಸಮಾಜ ಬಾಂಧವರಿಗೆ ಅನ್ಯಾಯ ಮಾಡಲು ಹೊರಟಿದ್ದೀರಲ್ಲ ಸ್ವಾಮಿ ಇದು ಸಮ್ಮತವೇ? ಇದೀಗ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದರೂ ತಮಗದು ಸಹ್ಯವಾಗುತ್ತಿಲ್ಲವೇಕೆ? ಎಂದವರು ಆಕ್ರೋಶ ಹೊರಹಾಕಿದ್ದಾರೆ.
    ವಿಳಂಬ ನೀತಿಗೆ ಖಂಡನೆ:
    ವೀರಶೈವ ಲಿಂಗಾಯತ ಮತ್ತು ಮರಾಠ ಸಮಾಜ ಬಾಂಧವರಿಗೆ ನಿಗಮ ಸ್ಥಾಪಿಸಿದ್ದಕ್ಕೆ ಬಹುಶಃ ನಮಗಿಂತಲೂ ಸಂತೋಷ ಪಡುವ ಸಮುದಾಯ ಬೇರೊಂದಿಲ್ಲ. ಆದರೆ, ಯಾವ ಬಸವಕಲ್ಯಾಣದ ಮಣ್ಣಿನಲ್ಲಿ ನಿಂತು ತಮ್ಮ ಪುತ್ರ ಮರಾಠಾ ಅಭಿವೃದ್ಧಿ ನಿಗಮ ಘೋಷಿಸಿದರೋ ಅದೇ ಮಣ್ಣಿನಲ್ಲಿ ಹಿಂದೆ ತಾವು ನಮ್ಮ ಸಮುದಾಯಕ್ಕೆ ಕೊಟ್ಟ ಆಶ್ವಾಸನೆ ಮರೆತು ಹೋಯಿತೇ? ಅಧಿಕಾರಕ್ಕೆ ಬಂದರೆ ತಳವಾರ-ಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುತ್ತೇನೆಂಬ ತಮ್ಮ ಆಶ್ವಾಸನೆ ಎಲ್ಲಿ ಹೋಯಿತು? ತಮ್ಮದೇ ಕೇಂದ್ರ ಸರ್ಕಾರ ತಳವಾರ-ಪರಿವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ನೀಡಿದರೂ ತಾವೇಕೆ ವಿಳಂಬ ನೀತಿ ಅನುಸರಿಸುತ್ತಿದ್ದೀರಿ? ಬಲಾಢ್ಯ ಸಮುದಾಯಗಳ ಪರ ನಿಗಮ ಘೋಷಿಸಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ತಮಗೆ ನಮ್ಮದೂ ಮತಗಳಿವೆ ಎಂಬುದು ಮರೆತು ಹೋಗಿದೆಯಾ? ಯಾವ ಬಸವಕಲ್ಯಾಣದಲ್ಲಿ ಮರಾಠ ಅಭಿವೃದ್ಧಿ ನಿಗಮ ಘೋಷಿಸಿದ್ದೀರೋ ಅದೇ ನೆಲದಲ್ಲಿ ನಮ್ಮ 46 ಸಾವಿರ ಮತಗಳಿವೆ ಎಂಬುದು ಬಹುಶಃ ತಾವು ಮರೆತಂತಿದೆ ಎಂದವರು ಎಚ್ಚರಿಸಿದ್ದಾರೆ.
    ಬಸವ ಕಲ್ಯಾಣ ಚಲೋ:
    ಯಾವ ರಾಜಕೀಯಕ್ಕಾಗಿ ತಾವು ಬಲಾಢ್ಯರ ಪರ ಕಾಯ್ದೆ ರೂಪಿಸುತ್ತಿದ್ದೀರೋ ಅದೇ ರಾಜಕೀಯಕ್ಕೆ ನಮ್ಮ ಸಮಾಜ ಕೊಡಲಿ ಪೆಟ್ಟು ಕೊಡಲು ಸನ್ನಾಹವಾಗಿದೆ. ಅದೇ ಬಸವ ಕಲ್ಯಾಣದಿಂದ ತಳವಾರ ಪರಿವಾರ ಸಮುದಾಯ ವಿನೂತನ ಹೋರಾಟಕ್ಕೆ ಮುನ್ನುಡಿ ಬರೆಯುತ್ತಿದೆ. ಶೀಘ್ರದಲ್ಲೇ ಬಸವ ಕಲ್ಯಾಣದಲ್ಲಿ ತಳವಾರ-ಪರಿವಾರ ಸಮಾಜದ ಹೋರಾಟದ ಕಹಳೆ ಮೊಳಗಲಿದೆ. ಇನ್ಮುಂದೆ ಎಲ್ಲೆಲ್ಲಿ ತಮ್ಮ ಪಕ್ಷದ ಚುನಾವಣೆ ನಡೆಯುವುದೋ ಅಲ್ಲಲ್ಲಿ ನಮ್ಮ ಸಮಾಜ ಜಾಗೃತಿ ಆಂದೋಲನ ಹಮ್ಮಿಕೊಳ್ಳುತ್ತಲೇ ಇರುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ತಮಗೆ ರಾಜಕೀಯ ಭವಿಷ್ಯ ಇಲ್ಲ ಎಂಬುದನ್ನು ನೆನಪಿಸುತ್ತಲೇ ಇರುತ್ತೇವೆ. ತತ್‌ಕ್ಷಣದಿಂದಲೇ ನಮ್ಮ ಸಮಾಜಕ್ಕೆ ಬಸವ ಕಲ್ಯಾಣ ಚಲೋ ಕರೆ ಕೊಡುತ್ತಿದ್ದೇವೆ ಎಂದು ಶಿವಾಜಿ ಮೆಟಗಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts