More

    ತಳವಾರ- ಪರಿವಾರ ಎಸ್ ಟಿ ಪ್ರಮಾಣ ಪತ್ರ ವಿಚಾರ, ಬಿಜೆಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ, ಉಪ ಚುನಾವಣೆಯಲ್ಲಿ ನೀಡಿದ ಭರವಸೆ ಏನಾಯ್ತು?

    ವಿಜಯಪುರ: ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಈವರೆಗೂ ಜಾತಿ ಪ್ರಮಾಣ ಪತ್ರ ನೀಡಲು ಮೀನ ಮೇಷ ಎಣಿಸುತ್ತಿದೆ‌.
    ಪದೇ ಪದೇ ಗೊಂದಲಕಾರಿ ಸುತ್ತೋಲೆ ಹೊರಡಿಸುತ್ತಿದ್ದ ರಾಜ್ಯ ಸರ್ಕಾರದ ವಿರುದ್ದ ಸಮುದಾಯಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಮೆತ್ತಗಾದ ಸರ್ಕಾರ ಸಿಂದಗಿ ಮತ್ತು ಹಾನಗಲ್ಲ
    ಉಪ ಚುನಾವಣೆ ಬಳಿಕ ಜಾತಿ ಪ್ರಮಾಣ ಪತ್ರ ಒದಗಿಸುವ ಭರವಸೆ ನೀಡಿತ್ತು. ಆ ಬಳಿಕ ಕಾಟಾಚಾರದ ಸುತ್ತೋಲೆ ಹೊರಡಿಸಿ ಕೈತೊಳೆದುಕೊಂಡಿತಾದರೂ ಭರವಸೆ ನೀಡಿದ ಪ್ರಕಾರ ಜಾತಿ ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾಡಲೇ ಇಲ್ಲ.
    ಇದೀಗ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಮತ್ತೆ ಕೊಟ್ಟ ಮಾತು ನೆನಪಾಗುತ್ತಿದೆ.
    ಪೂರಕವೆಂಬಂತೆ ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಜಿಲ್ಲೆಯ ಅಭ್ಯರ್ಥಿಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸೇರಿದಂತೆ ಹಲವು ನಾಯಕರಿದ್ದ ಸಭೆಯ ಗಮನ ಸೆಳೆದಿದ್ದಾರೆ.
    ಸಿಂದಗಿ ಉಪ ಚುನಾವಣೆ ಸಂದರ್ಭ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡುವ ವಾಗ್ದಾನ ಮಾಡಲಾಗಿತ್ತು. ಈವರೆಗೂ ಆ ಸಮಸ್ಯೆ ಬಗೆ ಹರಿದಿಲ್ಲ. ಆ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಮಸ್ಯೆ ಆಗುವುದು ನಿಶ್ಚಿತ ಎನ್ನಲಾಗಿ, ಸಭೆಯಲ್ಲಿ ವಿವಿಧ ಜಿಲ್ಲೆಗಳ ಪರಾಜಿತ ಅಭ್ಯರ್ಥಿಗಳು ಸಹ ಧ್ವನಿ ಗೂಡಿಸಿದ್ದಾರೆ. ಈ ಬಗ್ಗೆ ನೋಟ್ ಮಾಡಿಕೊಂಡ ನಾಯಕರು ಈ ವಿಷಯ ಪರಿಶೀಲಿಸುವುದಾಗಿ ತಿಳಿಸಿದರೆಂದು ಸಭೆಯಲ್ಲಿದ್ದ ಮುಖಂಡರು “ವಿಜಯವಾಣಿ”ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts