More

    ತರಕಾರಿ ವ್ಯಾಪಾರ, ಅಗತ್ಯವಸ್ತುಗಳಿಗಷ್ಟೇ ಮಾರುಕಟ್ಟೆ ಚಟುವಟಿಕೆ ಸೀಮಿತ

    ಯಲ್ಲಾಪುರ: ಪಟ್ಟಣದಲ್ಲಿ ತರಕಾರಿ ಮಾರಾಟಗಾರರು ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಮಾರುವವರು ಕೈಗೆ ಗ್ಲೌಸ್ ಹಾಕದೇ, ಮಾಸ್ಕ್ ಧರಿಸದೆ, ಗುಂಪು ಗುಂಪಾಗಿ ಕುಳಿತು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಒಳ್ಳೆಯ ತರಕಾರಿಯನ್ನು ಆರಿಸಿಕೊಳ್ಳಲು ಕೈಹಾಕಿದ ಗ್ರಾಹಕರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಕ್​ಡೌನ್ ನಿಯಮಗಳು ಕೇವಲ ಗ್ರಾಹಕರಿಗೆ ಅಷ್ಟೆಯೇ, ಅಥವಾ ವ್ಯಾಪಾರಿಗಳಿಗೂ ಅನ್ವಯಿಸುತ್ತದೆಯೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

    ವ್ಯಾಪಾರಸ್ಥರು ಸ್ವಚ್ಛತೆ ಕಾಪಾಡದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ಮಾಡುತ್ತಿರುವುದರಿಂದ ಡಿಎಸ್​ಪಿ ಜಿ. ಟಿ. ನಾಯಕ ಅವರೇ ವ್ಯಾಪಾರಸಸ್ಥರ ಬಳಿ ತೆರಳಿ ಸ್ವಚ್ಛತೆಯ ಪಾಠ ಹೇಳಿದ್ದಾರೆ. ಗ್ರಾಹಕರಿಗೆ ತರಕಾರಿ ಮುಟ್ಟಬೇಡಿ ಎನ್ನುವ ನೀವು ಕೂಡ ಅರ್ಧ ತಾಸಿಗೊಮ್ಮೆ ಸ್ಯಾನಿಟೈಜರ್​ನಿಂದ ಕೈ ತೊಳೆಯುತ್ತಿರಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದು ಹೇಳಿದರು ಅಲ್ಲದೆ, ಗಾಡಿಗಳಲ್ಲಿ ಮನೆ ಮನೆ ತಿರುಗಿ ವ್ಯಪಾರ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದರು. ಸಿಪಿಐ ಸುರೇಶ ಯಳ್ಳೂರ ಇದ್ದರು.

    ಅಗತ್ಯ ವಸ್ತು ಪೂರೈಕೆ ನಗರಕ್ಕೆ ಸೀಮಿತ !

    ಯಲ್ಲಾಪುರ: ಕರೊನಾ ಹಿನ್ನೆಲೆಯಲ್ಲಿ ವಿಧಿಸಿರುವ ಲಾಕ್​ಡೌನ್ ನಿಯಮ ಪಾಲಿಸಲು ಅನುಕೂಲವಾಗುವಂತೆ ಸರ್ಕಾರದಿಂದ ಜನತೆಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕೈಗೊಂಡಿರುವ ವ್ಯವಸ್ಥೆ ಕೇವಲ ನಗರ ಕೇಂದ್ರೀಕೃತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಟ್ಟಣ ಪ್ರದೇಶದಲ್ಲಿ ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಗ್ರಾಮೀಣ ಭಾಗಕ್ಕೆ ಸರಿಯಾಗಿ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಆಗುತ್ತಿಲ್ಲ. ಗ್ರಾಮೀಣ ಜನತೆಯ ಗೋಳು ಕೇಳುವವರು ಯಾರಿಲ್ಲ ಎಂಬಂತಾಗಿದೆ.

    ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಲೆಂದು ಪೆಟ್ರೋಲ್ ಪಂಪ್​ಗಳಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ನೀಡಿಕೆ ಬಂದ್ ಮಾಡಲಾಗಿದೆ. ಆದರೆ, ಇದರಿಂದ ಗ್ರಾಮೀಣ ಭಾಗದ ಜನತೆ ತೀರಾ ಸಂಕಷ್ಟ ಅನುಭವಿಸುವಂತಾಗಿದೆ. ದಿನಸಿ, ತರಕಾರಿ, ಅಗತ್ಯ ವಸ್ತುಗಳನ್ನು ಗ್ರಾಮೀಣ ಭಾಗಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವೆಡೆ ಆ ವ್ಯವಸ್ಥೆ ತಲುಪಿಸಲಾಗುತ್ತಿದೆ. ಒಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದೋ ಎರಡೋ ಪ್ರಮುಖ ಕೇಂದ್ರ ಸ್ಥಳಗಳಲ್ಲಿ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಒಂದೊಂದು ಮನೆ 2-3 ಕಿ.ಮೀ. ಅಂತರದಲ್ಲಿರುತ್ತದೆ. ಅಗತ್ಯ ವಸ್ತುಗಳು ದೊರಕುವ ಕೇಂದ್ರ ಸ್ಥಾನಕ್ಕೆ ಹೋಗಬೇಕೆಂದರೆ 9-10 ಕಿ.ಮೀ. ಕ್ರಮಿಸಬೇಕಾದ ಸ್ಥಿತಿಯಿದೆ. ಬೈಕ್ ಮೇಲೆ ಹೋಗಬೇಕೆಂದರೆ ಪೆಟ್ರೋಲ್ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

    ಮೊಬೈಲ್ ನೆಟ್​ವರ್ಕ್ ಇಲ್ಲ: ಗ್ರಾ.ಪಂ. ಮಟ್ಟದಲ್ಲಿ ಕರೆ ಮಾಡಿದರೆ ಗ್ರಾಮೀಣ ಕಾರ್ಯಪಡೆಯ ಮೂಲಕ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಗ್ರಾಮೀಣ ಮಟ್ಟದ ದೂರ ದೂರದ ಮನೆಗಳಿಗೆ ತಲುಪಿಸುವುದು ಕಷ್ಟದ ಕೆಲಸ. ಗ್ರಾಮೀಣ ಭಾಗದಲ್ಲಿ ಸ್ಥಿರ ದೂರವಾಣಿಗಳು ಕೆಟ್ಟು ಹೋಗಿ ವರ್ಷಗಳೆ ಕಳೆದಿದೆ. ಮೊಬೈಲ್ ನೆಟ್​ವರ್ಕ್ ಎಲ್ಲ ಹಳ್ಳಿಗಳಲ್ಲಿ ಇರುವುದಿಲ್ಲ. ಕರೆ ಮಾಡುವುದು ಹೇಗೆಂಬುದು ಯಕ್ಷಪ್ರಶ್ನೆ. ಜನತೆಗೆ ದಿನಸಿ, ತರಕಾರಿ, ಪಡಿತರ ತಲುಪಿಸುವ ಸಂಪೂರ್ಣ ಜವಾಬ್ದಾರಿ ತಮ್ಮದು ಎನ್ನುವ ಅಧಿಕಾರಿಗಳು ಇಂತಹ ಸಮಸ್ಯೆಗಳ ನಡುವೆ ಜನತೆಗೆ ಅಗತ್ಯ ವಸ್ತುಗಳು ತಲುಪದೆ ಹೋದರೆ, ಅದರ ಹೊಣೆ ಹೊರಲು ಸಿದ್ಧರಿರುವರೇ ಎಂಬ ಪ್ರಶ್ನೆ ತಾಲೂಕಿನ ಗ್ರಾಮೀಣ ಭಾಗದ ಜನರದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts