More

    ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿಗೆ ತಡೆ

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಉಂಟಾಗುತ್ತಿದ್ದ ಜನಜಂಗುಳಿ ಒಂದಿಷ್ಟು ನಿಯಂತ್ರಣಕ್ಕೆ ಬಂದಿದೆ.

    ಎಪಿಎಂಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಕ್ಕಟ್ಟಾದ ಒಂದೇ ರಸ್ತೆಯಲ್ಲಿ ನಡೆಯುತ್ತಿದ್ದ ಸಗಟು ತರಕಾರಿ ವ್ಯಾಪಾರ ವಹಿವಾಟನ್ನು ಮತ್ತೊಂದು ರಸ್ತೆಗೆ ಸ್ಥಳಾಂತರಿಸಿ ಅಲ್ಲಿ ಪ್ರತ್ಯೇಕ 75 ಮಳಿಗೆ ಆರಂಭಿಸುವ ಮೂಲಕ ಜನರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

    ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ವನಿಸಿದಂತೆ ಈಗಿರುವ ತರಕಾರಿ ಮಾರುಕಟ್ಟೆ ಪಕ್ಕದ ದೊಡ್ಡ ರಸ್ತೆಯಲ್ಲಿ ಮಾರ್ಕಿಂಗ್ ಮಾಡಿ 75 ಮಳಿಗೆ ಗುರುತಿಸಲಾಗಿತ್ತು.

    ಅಲ್ಲಿಗೆ ತರಕಾರಿ ತಂದು ರೈತರು ಹಾಕಿದರು. ಎಪಿಎಂಸಿ ಪರವಾನಗಿ ಪಡೆದ ವರ್ತಕರು ಸವಾಲ್ ಮೂಲಕ ಚಿಲ್ಲರೆ ವ್ಯಾಪಾರಸ್ಥರಿಗೆ ಮಾರಾಟ ಮಾಡಿದರು. ಹೀಗೆ ಕೊಂಡುಕೊಂಡ ತರಕಾರಿಯನ್ನು ವ್ಯಾಪಾರಸ್ಥರು ವಾರ್ಡ್​ಗಳಲ್ಲಿ ಮಾರಾಟ ಮಾಡಲು ಒಯ್ದರು. ಈ ಹೊಸ ವ್ಯವಸ್ಥೆಯನ್ನು ಭಾನುವಾರದಿಂದ ಜಾರಿ ಮಾಡಲಾಗಿದೆ. ಇದರಿಂದ ನಿತ್ಯ ಏರ್ಪಡುತ್ತಿದ್ದ ಜನದಟ್ಟಣೆ ಕಡಿಮೆಯಾಗಿದೆ. ಜೊತೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವ ಮೂಲಕ ಚಿಲ್ಲರೆ ವ್ಯಾಪಾರಕ್ಕೂ ಕಡಿವಾಣ ಹಾಕಲಾಗಿದೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಿಯೂ ಜನದಟ್ಟಣೆಯಾಗಬಾರದು ಎಂದು ಜಿಲ್ಲಾಡಳಿತ ಕಳೆದೊಂದು ವಾರದಿಂದ ಹೇಳುತ್ತಲೇ ಇತ್ತು. ಎಪಿಎಂಸಿಯಲ್ಲಿ ತರಕಾರಿ ಮಾರುಕಟ್ಟೆ ಮಾತ್ರ ಇದಕ್ಕೆ ಹೊರತಾಗಿತ್ತು. ನಿತ್ಯ ಸಾವಿರ ಸಂಖ್ಯೆಯಲ್ಲಿ ಒಂದೇ ಕಡೆ ಜನ ಸೇರುತ್ತಿದ್ದರು. ವರ್ತಕರು, ಚಿಲ್ಲರೆ ವ್ಯಾಪಾರಸ್ಥರು ಅಷ್ಟೇ ಅಲ್ಲ ಮನೆಗೂ ತರಕಾರಿ ಕೊಂಡೊಯ್ಯಲು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಇದನ್ನು ನಿಯಂತ್ರಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಇದೀಗ ಒಂದು ಪರಿಹಾರ ಕಂಡುಕೊಂಡಂತಾಗಿದೆ.

    ಸದಸ್ಯರ ಬೇಸರ: ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ ಅವರು ಹಲವು ದಿನಗಳಿಂದ ಸಾಮಾನ್ಯ ಸಭೆ ಸೇರಿ ಯಾವುದೇ ಸಭೆ ಕರೆದಿಲ್ಲ. ಇತರೆ ಸದಸ್ಯರಿಗೆ ಮಾಹಿತಿ ಸಹ ನೀಡುವುದಿಲ್ಲ. ಕನಿಷ್ಠ ಪಕ್ಷ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ, ಸೂಚನೆ ಪಡೆದು ಮುಂದಡಿ ಇಡುತ್ತಿಲ್ಲ. ಇದೇ ಕಾರಣಕ್ಕೆ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹಲವು ಅವಾಂತರಗಳು ನಡೆದವು. ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಇದೆಯೇ ಎಂಬ ಅನುಮಾನ ಬರುವಂತಾಗಿದೆ ಎಂದು ಅನೇಕ ಸದಸ್ಯರು ಪತ್ರಿಕೆ ಎದುರು ದೂರಿಕೊಂಡಿದ್ದಾರೆ.

    ಪಾಸ್ ಇದ್ದವರನ್ನು ಒಳಗೆ ಬಿಟ್ಟ ಪೊಲೀಸರು: ಪೇಟೆ ಕಾರ್ಯಕರ್ತರು, ವರ್ತಕರು, ಕಮಿಷನ್ ಏಜೆಂಟರ್​ಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರನ್ನು ಮಾತ್ರ ತರಕಾರಿ ಮಾರುಕಟ್ಟೆಗೆ ಒಳ ಬಿಡಲಾಯಿತು. ಎಪಿಎಂಸಿ ನವನಗರ ಠಾಣೆ ಪೊಲೀಸರು ಎಪಿಎಂಸಿಯ ಎಲ್ಲ ಗೇಟ್​ಗಳನ್ನು ಬಂದ್ ಮಾಡಿ ಒಂದೇ ಗೇಟ್ ಮೂಲಕ ಪ್ರವೇಶಿಸಲು ಅವಕಾಶ ನೀಡಿದ್ದರು. ಪಾಸ್ ಇದ್ದವರನ್ನು ಮಾತ್ರ ಪರಿಶೀಲಿಸಿ ಒಳ ಬಿಟ್ಟರು. ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು. ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಪರಸ್ಪರ ಅಂತರ ಹೇಗೆ ಕಾಯ್ದುಕೊಳ್ಳಬೇಕೆಂದು ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts