More

    ತಮ್ಮಡಿಕೊಪ್ಪ-ರಿಪ್ಪನ್‌ಪೇಟೆ ರಸ್ತೆ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ರಿಪ್ಪನ್‌ಪೇಟೆ: ಸತತ ಮಳೆಯಿಂದಾಗಿ ತಮ್ಮಡಿಕೊಪ್ಪ-ಮಳವಳ್ಳಿ-ರಿಪ್ಪನ್‌ಪೇಟೆ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ಶಾಸಕ ಹರತಾಳು ಹಾಲಪ್ಪ ರಸ್ತೆ ರಿಪೇರಿ ಮಾಡುವತ್ತ ಗಮನ ಹರಿಸಿಲ್ಲವೆಂದು ಆರೋಪಿಸಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
    ಕಂದಕ ನಿರ್ಮಾಣಗೊಂಡ ರಸ್ತೆ ಬದಿಯಲ್ಲಿ ಪ್ರತಿಭಟಿಸಿದ ಗೋಪಾಲಕೃಷ್ಣ, ತಮ್ಮಡಿಕೊಪ್ಪದ ಸುತ್ತಮುತ್ತಲಿನ ಗ್ರಾಮಸ್ಥರು ನಿತ್ಯ ವಹಿವಾಟಿಗಾಗಿ ರಿಪ್ಪನ್‌ಪೇಟೆಯನ್ನೇ ಆಶ್ರಯಿಸಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ರಸ್ತೆ ಕುಸಿದು ಜನರ ಓಡಾಟಕ್ಕೆ ತೊಂದರೆ ಆಗಿದೆ. ರಸ್ತೆ ಹದಗೆಟ್ಟಿರುವ ಕಾರಣ 12 ಕಿಮೀ ಸುತ್ತಿಬಳಸಿ ರಿಪ್ಪನ್‌ಪೇಟೆ ಸೇರಬೇಕಾಗಿದೆ ಎಂದರು.
    ಶೇ.40, 60 ಕಮೀಷನ್ ಪಡೆಯುತ್ತಿರುವ ಸರ್ಕಾರವಾಗಲಿ, ಶಾಸಕರಾಗಲಿ ಸ್ಥಳೀಯರ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಪಕ್ಷ ರಾಜಕಾರಣ ಮಾಡುತ್ತಿರುವ ಶಾಸಕರು ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ತಮ್ಮ ಕಾರ್ಯಕರ್ತರಿಗೆ ನೀಡುತ್ತಿದ್ದು, ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
    ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೇವಲ 10 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೂಡಲೇ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲವಾದರೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts