More

    ತಪಾಸಣೆಗೆ ಒಳಪಡಿಸಿ ವರದಿ ಸಲ್ಲಿಸಿ

    ಧಾರವಾಡ: ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು, ಔಷಧ ಅಂಗಡಿಗಳಲ್ಲಿ ತೀವ್ರ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ ಪ್ರಕರಣಗಳಿಗೆ ಸಂಬಂಧಿಸಿದ ವರದಿಗಳನ್ನು ನಿತ್ಯ ಸಂಗ್ರಹಿಸಲಾಗುತ್ತಿದೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಕೋವಿಡ್ ತಪಾಸಣೆಗೆ ಒಳಪಡಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈವರೆಗೂ ಮಾಹಿತಿ ನೀಡದ ಯಾವುದಾದರೂ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳು ಇದ್ದರೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು. ಇದಲ್ಲದೆ ಆರೋಗ್ಯ ಸೇತು ಮೊಬೈಲ್ ಆಪ್​ನಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಆಧರಿಸಿ ಲಕ್ಷಣಗಳನ್ನು ಹೊಂದಿರುವವರನ್ನು ಗುರುತಿಸಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು. ಸಂಗ್ರಹಿಸಿದ ವರದಿಯನ್ನು ನಿತ್ಯ ಸಲ್ಲಿಸಬೇಕು ಎಂದು ಸೂಚಿಸಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಹು-ಧಾ ಸ್ಮಾರ್ಟ್​ಸಿಟಿ ಯೋಜನೆ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ಔಷಧ ನಿಯಂತ್ರಣ ಇಲಾಖೆ ಉಪನಿರ್ದೇಶಕ ಕೆ.ಎಸ್. ಮಲ್ಲಿಕಾರ್ಜುನ, ಇತರರು ಇದ್ದರು.

    ಕ್ವಾರಂಟೈನ್ ಉಲ್ಲಂಘನೆ ಪ್ರಕರಣ

    ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ಸಂಚರಿಸುತ್ತಿದ್ದ ಜಿಲ್ಲೆಯ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಾಸಿಟಿವ್ ವ್ಯಕ್ತಿಗಳೊಂದಿಗೆ ದ್ವಿತೀಯ ಹಂತದ ಸಂಪರ್ಕ ಹೊಂದಿರುವವರನ್ನು ನಿಯಂತ್ರಿಸಲು ಮುಂಜಾಗ್ರತೆ ಕ್ರಮವಾಗಿ ಕ್ವಾರಂಟೈನ್​ಗೆ ಒಳಪಡಿಸಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ಕುರಿತು ನೆರೆ ಹೊರೆ ನಾಗರಿಕರೂ ಮಾಹಿತಿ ನೀಡಬೇಕು. ಜಿಲ್ಲಾಡಳಿತದ ಸಹಾಯವಾಣಿ (1077) ಅಥವಾ ವಾಟ್ಸ್ ಆಪ್ ಸಂಖ್ಯೆ 944847646/41 ಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಮಹಿಳೆ, ಬಾಲಕಿ ಬಿಡುಗಡೆ

    ಧಾರವಾಡ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗುಣಮುಖರಾಗಿದ್ದು, ಕಿಮ್್ಸ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ 30 ವರ್ಷದ ಮಹಿಳೆ (ಪಿ-430) ಹಾಗೂ ಆಜಾದ್ ಕಾಲನಿಯ 13 ವರ್ಷದ ಬಾಲಕಿ (ಪಿ-431) ಸಂಪೂರ್ಣ ಗುಣಮುಖರಾಗಿದ್ದಾರೆ. 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. ಎಕ್ಸ್​ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯ 17 ಜನ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಮುಲ್ಲಾ ಓಣಿ ಸಾಮಾನ್ಯ ವಲಯ

    ಧಾರವಾಡ: ಹುಬ್ಬಳ್ಳಿ ಮುಲ್ಲಾ ಓಣಿಯ ವ್ಯಕ್ತಿಯಿಂದ ಅವರ ಕುಟುಂಬದ ಐವರಿಗೆ ಕರೊನಾ ಸೋಂಕು ಹರಡಿತ್ತು. ಇದೀಗ ಅವರೆಲ್ಲರೂ ಗುಣಮುಖರಾಗಿದ್ದರಿಂದ ಮುಲ್ಲಾ ಓಣಿಯನ್ನು ಕಂಟೇನ್ಮೆಂಟ್ ಮುಕ್ತ, ಸಾಮಾನ್ಯ ಪ್ರದೇಶ ಎಂದು ಘೊಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಮುಲ್ಲಾ ಓಣಿಯಲ್ಲಿ ಏ. 9ರಂದು ಪಿ-194 ವ್ಯಕ್ತಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಈ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೊಷಿಸಲಾಗಿತ್ತು. ನಂತರ ಇವರ ಕುಟುಂಬದ ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸದ್ಯ ಎಲ್ಲ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 28 ದಿನಗಳಿಂದ ಈ ಪ್ರದೇಶದಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಮುಲ್ಲಾ ಓಣಿ ಪ್ರದೇಶವನ್ನು ಸಾಮಾನ್ಯ ಪ್ರದೇಶವಾಗಿ ಘೊಷಿಸಲಾಗಿದೆ. 100 ಮೀ. ವ್ಯಾಪ್ತಿಯ ಸೀಲ್​ಡೌನ್ ಹಾಗೂ ಬಫರ್ ಜೋನ್​ಗಳನ್ನೂ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts