More

    ತನಿಖೆಗೆ ಪೂರಕ ಕೌಶಲಗಳನ್ನು ವೃದ್ಧಿಸಿಕೊಳ್ಳಿ -ನ್ಯಾಯಾಧೀಶ ಪ್ರವೀಣ್ ಕುಮಾರ್ ಕಿವಿಮಾತು – ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟ ಉದ್ಘಾಟನೆ 

    ದಾವಣಗೆರೆ: ಪ್ರಕರಣಗಳ ತನಿಖೆಗೆ ಪೂರಕ ಕೌಶಲಗಳನ್ನು ಪೊಲೀಸರು ವೃದ್ಧಿಸಿಕೊಳ್ಳಬೇಕು. ಇದರಿಂದ ಅವರಿಗಷ್ಟೇ ಅಲ್ಲದೆ ನ್ಯಾಯಾಧೀಶರು, ಸಂತ್ರಸ್ತರವರೆಗೂ ನೆರವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2ನೇ ಹೆಚ್ಚುವರಿ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್ ತಿಳಿಸಿದರು.
    ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಮಾತನಾಡಿದರು.
    ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಆರೋಪವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಪಡಿಸಬೇಕಿದೆ. ತನಿಖಾ ಹಂತದಲ್ಲಿನ ಲೋಪಗಳು ಆರೋಪಿಯ ಪರವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ತನಿಖಾಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
    ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ಅಗತ್ಯವಾದಲ್ಲಿ ಹೆಚ್ಚಿನ ಕೌಶಲ ಹೊಂದಿರುವ ಇತರೆ ಪೊಲೀಸ್ ಅಧಿಕಾರಿಗಳ ನೆರವು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
    ಕರ್ತವ್ಯಕೂಟದಲ್ಲಿ, ಪೊಲೀಸರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ 18 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಿಂದ ಪೊಲೀಸರ ತನಿಖಾ ಸಾಮರ್ಥ್ಯ ಹೆಚ್ಚಾಗಲಿದೆ. ಇದು ಸಾರ್ವಜನಿಕ ಅಭಿಯೋಜಕರು ಹಾಗೂ ನ್ಯಾಯಾಧೀಶರಿಗೆ ನೆರವಾಗುತ್ತದೆ. ಇದರಿಂದ ಸಂತ್ರಸ್ತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಪೊಲೀಸರು ಅಪರಾಧಿಕ ಪ್ರಕರಣಗಳನ್ನು ತನಿಖೆ ಮಾಡಿದರೆ ಸಾಲದು. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದಾಗ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯ. ತನಿಖಾ ಸಂದರ್ಭದಲ್ಲಿ ಮೂಲ ವಿಷಯಗಳಲ್ಲೇ ತಪ್ಪಾಗದಂತೆ ನೋಡಿಕೊಳ್ಳಬೇಕು. ಇತ್ತೀಚಿನ ತೀರ್ಪುಗಳು ಹಾಗೂ ಕಾಯ್ದೆಗಳಲ್ಲಿ ಆಗಿರುವ ಬದಲಾವಣೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
    ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಸೈಬರ್ ವಲಯದ ಬಗ್ಗೆಯೂ ಹೆಚ್ಚಿನ ತಿಳಿವಳಿಕೆ ಹೊಂದಬೇಕು. ವಿಧಿ ವಿಜ್ಞಾನ ವಲಯ, ಶ್ವಾನ ದಳದ ಕಾರ್ಯನಿರ್ವಹಣೆ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
    ಪ್ರಾಸ್ತಾವಿಕ ಮಾತನಾಡಿದ ಡಿವೈಎಸ್‌ಪಿ ಹಾಗೂ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಎ.ಕೆ. ರುದ್ರೇಶ್, 2016ರಲ್ಲಿ ಕರ್ತವ್ಯ ಕೂಟ ಆರಂಭಿಸಲಾಗಿತ್ತು. ಇದು ಐದನೆಯದಾಗಿದೆ. ಪೂರ್ವ ವಲಯದ ನಾಲ್ಕು ಜಿಲ್ಲೆಗಳ ಪೊಲೀಸರು ಕರ್ತವ್ಯ ಕೂಟದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ದೊಡ್ಡಬಾತಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕಿ ಡಾ. ಛಾಯಾ ಕುಮಾರಿ ಇದ್ದರು. ಬೆಸ್ಕಾಂ ಜಾಗೃತ ದಳ ಠಾಣೆಯ ಸಿ.ಪಿ.ಸಿ. ಸಂಗೇನಹಳ್ಳಿ ದೇವರಾಜ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಉಪಾಧೀಕ್ಷಕ ಪಿ.ಬಿ. ಪ್ರಕಾಶ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts