More

    ತಡೆಗೋಡೆರಹಿತ ಕಸ ಘಟಕಗಳು!; ಜಾನುವಾರುಗಳ ಪ್ರಾಣಕ್ಕೆ ಸಂಚಾಕಾರ; ನಿಯಮ ಉಲ್ಲಂಘನೆ ಅವಾಂತರ

    ಶಿವರಾಜ ಎಂ.ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಟೆರ‌್ರಾರ್ಮ ಹಾಗೂ ಎಂಎಸ್‌ಜಿಪಿ ಕಸದ ಘಟಕಗಳು ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಸಂಚಾಕಾರ ತಂದೊಡ್ಡುತ್ತಿವೆ. ಕಸ ಘಟಕದ ಸುತ್ತ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಸರ್ಕಾರದ ಒಪ್ಪಂದವನ್ನು ಗಾಳಿಗೆ ತೂರಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬುದು ಬೆಳಕಿಗೆ ಬಂದಿದೆ.

    ಹೌದು. ಕಸ ಘಟಕ ಆರಂಭಕ್ಕೂ ಮುನ್ನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಘಟಕಗಳು ತಡೆಗೋಡೆ ನಿರ್ಮಿಸಿ ಜಾನುವಾರುಗಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಜತೆಗೆ ತಡೆಗೋಡೆ ಸುತ್ತಲೂ ಹಸಿರು ನಿರ್ಮಾಣ(ಸಸ್ಯಕಾಶಿ) ಮಾಡುವುದಾಗಿ ಹೇಳಿತ್ತು. ಆದರೆ ಜಾನುವಾರುಗಳು ಯಾವುದೇ ಅಡೆತಡೆಯಿಲ್ಲದೆ ಘಟಕಗಳನ್ನು ಪ್ರವೇಶಿಸುತ್ತಿದ್ದು, ವಿಷಯುಕ್ತ ತ್ಯಾಜ್ಯ ತಿಂದು ಸಾವನ್ನಪ್ಪುತ್ತಿವೆ ಎಂಬುದು ಗೋಚರವಾಗುತ್ತಿದೆ. ಈಗಾಗಲೇ ನೂರಾರು ಜಾನುವಾರು ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಸಭೆಯಲ್ಲಿ ಸಿಎಂ ಗಮನಕ್ಕೆ ತಂದಿದ್ದಾರೆ.

    ಆಯೋಗದ ಭೇಟಿಯಲ್ಲಿ ಬಯಲು: ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ತಂಡ ಎಂಎಸ್‌ಜಿಪಿ ಕಸ ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಘಟಕಗಳ ಮುಖ್ಯದ್ವಾರದಲ್ಲಿ ತಡೆಗೋಡೆ ನಿರ್ಮಿಸಿ ಸ್ಥಳೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಘಟಕಗಳ ಹಿಂಬದಿಯಲ್ಲಿ ತಡೆಗೋಡೆಯಿಲ್ಲ. ಕೆಲವು ಕಡೆ ಕಾಟಾಚಾರಕ್ಕೆ ಎಂಬಂತೆ ತಂತಿ ಬೇಲಿ ಹಾಕಲಾಗಿದೆ. ಇದರ ಮೂಲಕ ಸುಲಭವಾಗಿ ದನಕರುಗಳು ಪ್ರವೇಶ ಪಡೆಯುತ್ತವೆ ಎಂಬುದು ಗೊತ್ತಾಗಿದೆ.

    ಹೋಟೆಲ್‌ಗಳ ತ್ಯಾಜ್ಯ: ಬಿಬಿಎಂಪಿ ವ್ಯಾಪ್ತಿಯಲ್ಲಿನ ತ್ಯಾಜ್ಯವನ್ನಷ್ಟೆ ಅಲ್ಲದೆ ಖಾಸಗಿ ಕಾರ್ಖಾನೆಗಳು, ಖಾಸಗಿ ಹೋಟೆಲ್, ರೆಸ್ಟೋರೆಂಟ್‌ಗಳ ತ್ಯಾಜ್ಯವನ್ನು ವಾಮಮಾರ್ಗದ ಮೂಲಕ ಘಟಕಗಳಿಗೆ ಸಾಗಿಸಲಾಗುತ್ತಿದೆ. ಹೋಟೆಲ್ ತ್ಯಾಜ್ಯಕ್ಕಾಗಿ ಜಾನುವಾರುಗಳು ಮುಗಿಬೀಳುತ್ತವೆ. ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯ ತಿನ್ನುವುದರಿಂದ ಜಾನುವಾರು ಸಾವಿಗೀಡಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

    ಲಿಜೆಟ್ ಟ್ಯಾಂಕ್: ಕಸದ ಘಟಕಗಳಲ್ಲಿ ಉತ್ಪತ್ತಿಯಾಗುವ ಕಸದ ಲಿಜೆಟ್‌ಗಳನ್ನು ಸಂಗ್ರಹಿಸಲು ದೊಡ್ಡ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೆರೆದ ಲಿಜೆಟ್ ತೊಟ್ಟಿಗಳಲ್ಲಿನ ನೀರು ಕುಡಿದರೂ ಜಾನುವಾರುಗಳು ಬಲಿಯಾಗುತ್ತವೆ. ಈ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡಿಲ್ಲ. ನಿತ್ಯ ಜಾನುವಾರುಗಳ ಹಿಂಡು ಘಟಕಗಳತ್ತ ಧಾವಿಸುತ್ತವೆ.

    ಸಂಸ್ಕರಣೆಯೂ ಇಲ್ಲ, ವಿಲೇವಾರಿಯೂ ಇಲ್ಲ: ಹಲವು ಹೋರಾಟ ಪ್ರತಿಭಟನೆಗಳಿಂದಾಗಿ 2016ರಲ್ಲಿ ಟೆರ‌್ರಾರ್ಮ ಕಸ ಸಂಸ್ಕರಣ ಘಟಕ ಸ್ಥಗಿತಗೊಳಿಸಲಾಯಿತು. ಘಟಕ ಬಂದ್ ಆದ ಬಳಿಕ ಇಲ್ಲಿನ ಬೆಟ್ಟದಷ್ಟು ಕಸದ ರಾಶಿ ಸಂಸ್ಕರಿಸಿ ಹಂತಹಂತವಾಗಿ ಸಂಪೂರ್ಣವಾಗಿ ವಿಲೇವಾರಿ ಮಾಡುವುದಾಗಿ ಹೇಳಲಾಗಿತ್ತು. ಘಟಕ ಬಂದ್ ಆದ ಸಂತಸದಲ್ಲಿ ಸ್ಥಳೀಯರೂ ಸಹ ಈಗಾಗಲೇ ಸುರಿದಿದ್ದ ಇಲ್ಲಿನ ಕಸದ ರಾಶಿ ವಿಷಯನ್ನು ಮರೆತುಬಿಟ್ಟರು. ಆರಂಭದಲ್ಲಿ ಕಸದ ರಾಶಿ ಮೇಲೆ ಮಣ್ಣು ಸುರಿದು ಸ್ಥಳೀಯರ ಕಣ್ಣೋರೆಸುವ ತಂತ್ರ ಅನುಸರಿಸಲಾಯಿತು. ಆದರೆ ಮಳೆ ನೀರು ಕಸ ಸೇರಿ ಕಸ ಕೊಳೆತು ಉತ್ಪತ್ತಿಯಾಗುವ ಲೆಜೆಟ್ ಹರಿದು ತೊಟ್ಟಿ ಸೇರಿ ಕೆರೆಯಂತಾಗಿದೆ. ಈ ನೀರು ಸಂಸ್ಕರಿಸಿ ವಿಲೇವಾರಿ ಮಾಡುವ ಗೋಜಿಗೂ ಹೋಗಿಲ್ಲ. ಪರಿಣಾಮವಾಗಿ ಜಾನುವಾರು ಇದೇ ನೀರು ಕುಡಿದು ಮರಣಶಯ್ಯೆ ಸೇರುವಂತಾಗಿದೆ.

    ಸರ್ಕಾರದೊಂದಿಗಿನ ಕರಾರಿನಂತೆ ಘಟಕಗಳ ಸುತ್ತ ತಡೆಗೋಡೆ ನಿರ್ಮಾಣವಾಗಬೇಕು. ಜಾನುವಾರು ಪ್ರವೇಶಕ್ಕೆ ಅವಕಾಶವಿಲ್ಲದಂತೆ ಕ್ರಮಕೈಗೊಳ್ಳಬೇಕು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಕಾನೂನು ಬಾಹಿರವಾಗಿದೆ.
    ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಬೆಂ.ಗ್ರಾಮಾಂತರ

    ಎಂಎಸ್‌ಜಿಪಿ ಘಟಕ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ನಿಯಮವಿದೆ. ಆದರೆ ಕಂಪನಿ ನಿಯಮ ಉಲ್ಲಂಸಿರುವುದು ಸ್ಥಳ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು.
    ಜಗದೀಶ್ ಹಿರೇಮಣಿ, ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts