More

    ತಡವಲಗಾ ಹಳ್ಳದಲ್ಲಿ ಯಂತ್ರಗಳ ಸದ್ದು, ಉದ್ಯೋಗ ಖಾತ್ರಿ ಯೋಜನೆ ದುರ್ಬಳಕೆ ಆರೋಪ, ಇದೇನು ಹೂಳೆತ್ತುವುದೋ ಹಣ ಎತ್ತುವ ಯೋಜನೆಯೋ?

    ಇಂಡಿ: ಹಳ್ಳದ ಹೂಳೆತ್ತುವ ಯೋಜನೆಯೊಂದು ಹಣ ಎತ್ತುವ ಯೋಜನೆಯನ್ನಾಗಿ ಮಾಡಿಕೊಂಡಿರುವ ಆರೋಪ ಇಂಡಿ ತಾಲೂಕಿನ ತಡವಲಗಾ ಗ್ರಾಮದಿಂದ ಕೇಳಿ ಬಂದಿದೆ.
    ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿದ್ದ ಸರ್ಕಾರದ ಮಹಾತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ
    ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಯೋಜನೆಯಡಿ ಹಳ್ಳದ ಹೂಳೆತ್ತುವು ಕಾಮಗಾರಿಗೆ ಬೃಹತ್ ಯಂತ್ರ ಬಳಸಿಕೊಳ್ಳಲಾಗುತ್ತಿದೆ.
    ಮಹಾಮಾರಿ ಕರೊನಾದಿಂದಾಗಿ ಲಾಕ್ ಡೌನ್ ವಿಧಿಸಲಾಗಿದ್ದು ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದ ಜನ ಜಿಲ್ಲೆಗೆ ವಲಸೆ ಬಂದಿದ್ದಾರೆ. ಇಂಥವರಿಗೆ ಉದ್ಯೋಗ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ‌ ಅನುಷ್ಟಾನಕ್ಕೆ ತಂದಿದೆ. ಆದರೆ, ಇಲ್ಲಿನ ಗ್ರಾಪಂ ಸಿಬ್ಬಂದಿ ಹಾಗೂ ಸದಸ್ಯರು ಸದರಿ ಯೋಜನೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಗ್ರಾಮ ಮಂಜುನಾಥ ಮೂಲಿಮನಿ ಆರೋಪಿಸಿದ್ದಾರೆ.
    ತಡವಲಗಾ ಹಳ್ಳ, ತಾಳಿಕೋಟಿ ಹಳ್ಳ ಹಾಗೂ ಮಾಳಿ ಹಳ್ಳದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಶೇ. 10 ರಷ್ಟು ಯಂತ್ರೋಪಕರಣ ಬಳಸಲು ಅವಕಾಶ ಇದೆ. ಆದರೆ, ಇಡೀ ಕಾಮಗಾರಿಯನ್ನು ಯಂತ್ರೋಪಕರಣ ಬಳಸಿಯೇ ಕೈಗೊಳ್ಳಲಾಗುತ್ತಿರುವುದು ಕಂಡು ಬಂದಿದೆ. ಒಂದು ಜೆಸಿಬಿ ಮತ್ತು ಹಲವಾರು ಟ್ರ್ಯಾಕ್ಟರ್ ಗಳು ಸದ್ದು ಮಾಡುತ್ತಿವೆ.
    ಸುಮಾರು 20 ರಿಂದ 30 ಲಕ್ಷ ರೂ.ವೆಚ್ಚದ ಕಾಮಗಾರಿಗಳನ್ನು ಕೂಲಿ ಕಾರ್ಮಿಕರನ್ನು ಬಳಸದೇ ಕೈಗೊಳ್ಳಲಾಗುತ್ತಿದೆ. ಕೇವಲ 10-15 ದಿನದಲ್ಲಿ ಕಾಮಗಾರಿ ಮುಗಿಸಿ ಎಲ್ಲ ಹಣ ಲಪಟಾಯಿಸುವ ಉದ್ದೇಶವಿದ್ದು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣ ದುರುಪಯೋಗವಾಗುವುದನ್ನು ತಡೆಯಬೇಕೆಂದು ಸಂತೋಷ‌ ಸಾರವಾಡ ಎಂಬುವರು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ. ಈ ಬಗ್ಗೆ ಪಿಡಿಒ ಮಹೇಶ ನಾಯಕ ಅವರನ್ನು ಸಂಪರ್ಕಿಸಲಾಗಿ ಸದ್ಯ ಸಭೆಯಲ್ಲಿದ್ದು ಆ ಬಳಿಕ ಮಾಹಿತಿ‌ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts