More

    ತಡರಾತ್ರಿವರೆಗೂ ಪರದಾಡಿದ ಕರೊನಾ ಸೋಂಕಿತ

    ಹುಬ್ಬಳ್ಳಿ: ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಎಂದು ಇಲ್ಲಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನಿಗೆ ಕರೊನಾ ಬಂದಿರುವುದು ಸೋಮವಾರ ಸಂಜೆ ಖಾತ್ರಿಯಾಗಿದ್ದು, ಆತನನ್ನು ಕಿಮ್ಸ್​ಗೆ ದಾಖಲಿಸಲು ಸಂಬಂಧಿಕರು ತಡರಾತ್ರಿವರೆಗೆ ತೀವ್ರ ಪರದಾಡಿದ ಘಟನೆ ನಡೆದಿದೆ.

    ಬೆಂಗಳೂರಿನಲ್ಲಿ ರೋಗಿಯೊಬ್ಬರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತ ಮೃತಪಟ್ಟ ಘಟನೆ ಸಾರ್ವಜನಿಕರ ನೆನಪಿನಿಂದ ಮರೆಯಾಗುವ ಮುನ್ನವೇ ಹುಬ್ಬಳ್ಳಿಯಲ್ಲಿ ರೋಗಿ ಮತ್ತು ಸಂಬಂಧಿಗಳು ಅದೇ ರೀತಿ ಪಡಿಪಾಟಲು ಅನುಭವಿಸಿದರು.

    ಗದಗ ರಸ್ತೆ ಪ್ರದೇಶದ ಅಂದಾಜು 42 ವರ್ಷದ ವ್ಯಕ್ತಿಯ ಗಂಟಲ ದ್ರವವನ್ನು ವಿವೇಕಾನಂದ ಆಸ್ಪತ್ರೆಯಲ್ಲೇ ಸಂಗ್ರಹಿಸಲಾಗಿತ್ತು. ಸೋಮವಾರ ಸಂಜೆ ಪಾಸಿಟಿವ್ ವರದಿ ಬರುತ್ತಿದ್ದಂತೆ ಆಸ್ಪತ್ರೆಯವರು ತಮ್ಮಲ್ಲಿ ಸಾಕಷ್ಟು ಸೌಕರ್ಯ ಇಲ್ಲದ್ದರಿಂದ ಕಿಮ್ಸ್​ಗೆ ಹೋಗಿ ಎಂದಿದ್ದಾರೆ. ಕೃತಕ ಉಸಿರಾಟದ (ವೆಂಟಿಲೇಟರ್) ವ್ಯವಸ್ಥೆ ಮಾಡಿ ತಮ್ಮದೇ ಆಂಬುಲೆನ್ಸ್​ನಲ್ಲಿ ಒಬ್ಬ ವೈದ್ಯರ ಸಹಿತ ಕಿಮ್ಸ್​ಗೆ ಸಂಜೆ 7ರ ಸುಮಾರಿಗೆ ಕರೆದೊಯ್ದಿದ್ದಾರೆ.

    ವಿವೇಕಾನಂದ ಆಸ್ಪತ್ರೆಯಲ್ಲೂ ಕರೊನಾ ರೋಗಿಗಳಿಗೆ ಹಾಸಿಗೆ ಕಾದಿಡುವಂತೆ ಈಗಾಗಲೇ ಸೂಚಿಸಿದ್ದು, ಅಲ್ಲೇ ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ. ರೋಗಿಯ ಸಂಬಂಧಿಕರು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಸಂರ್ಪಸಿದ್ದಾರೆ. ಅವರು ಸಹ ವಿವೇಕಾನಂದದಲ್ಲೇ ಚಿಕಿತ್ಸೆ ಪಡೆಯಬೇಕು. ರೋಗಿಯ ಪ್ರಾಣಕ್ಕೆ ಏನಾದರೂ ತೊಂದರೆಯಾದರೆ ವಿವೇಕಾನಂದ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆದಾಗ್ಯೂ ವಿವೇಕಾನಂದ ಆಸ್ಪತ್ರೆಯವರು ತಮ್ಮಲ್ಲಿ ಸೌಕರ್ಯ ಇಲ್ಲ ಎಂದೇ ಹೇಳಿರುವುದಾಗಿ ತಿಳಿದುಬಂದಿದೆ.

    ರೋಗಿಯ ಸಂಕಟವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಯಿತು. ಅವರು, ರೋಗಿಯನ್ನು ದಾಖಲಿಸಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು ಮತ್ತು ವಿವೇಕಾನಂದ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ರಾತ್ರಿ 11.45ರವರೆಗೂ ರೋಗಿಯ ಸಂಬಂಧಿಕರು ಪರದಾಡಿದ ನಂತರ ಅಂತೂ ದಾಖಲು ಮಾಡಿಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts