More

    ತಂತಿ ಬೇಲಿ ಹಾಕುವ ಕಾರ್ಯಕ್ಕೆ ರೈತರ ವಿರೋಧ

    ಶಿರಹಟ್ಟಿ: ತಾಲೂಕಿನ ದೇವಿಹಾಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗಡಿ ಗುರುತಿಸುವ ಸಂಬಂಧ ಅರಣ್ಯ ಇಲಾಖೆಯವರು ತಂತಿ ಬೇಲಿ ಹಾಕಲು ಮುಂದಾಗಿರುವ ಕ್ರಮ ವಿರೋಧಿಸಿ ಬಗರ್​ಹುಕುಂ ಸಾಗುವಳಿದಾರ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

    ಉತ್ತರ ಕರ್ನಾಟಕ ಮಹಾಸಭಾ ಸಂಘಟನೆ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ನಾಲ್ಕು ತಿಂಗಳ ಹಿಂದಷ್ಟೇ ಅರಣ್ಯ ಇಲಾಖೆ ಗಡಿ ಪ್ರದೇಶ ಗುರುತಿಸುವ ಸಂಬಂಧ ತಂತಿ ಬೇಲಿ ಹಾಕುವ ಕಾರ್ಯ ವಿರೋಧಿಸಿ ದೇವಿಹಾಳದಿಂದ ಶಿರಹಟ್ಟಿ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗಿತ್ತು. ಆಗ ಜಿಲ್ಲಾಧಿಕಾರಿ ಆದೇಶದಂತೆ ಅಪರ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಬಗರ್​ಹುಕುಂ ಸಾಗುವಳಿದಾರರ ಸಮಸ್ಯೆ ಆಲಿಸಿ, ತಂತಿ ಬೇಲಿ ಹಾಕುವುದನ್ನು ನಿಲ್ಲಿಸಲು ತಿಳಿಸಿದ್ದರು. ಬಗರ್​ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ, ಹಕ್ಕುಪತ್ರ ಸಾಗುವಳಿದಾರರ ಕೈಸೇರಿಲ್ಲ. ಈಗ ಅರಣ್ಯ ಇಲಾಖೆ ಮತ್ತೆ ತಂತಿ ಬೇಲಿ ಹಾಕಲು ಹೊರಟಿರುವುದು ಸರಿಯಲ್ಲ ಎಂದರು.

    ಪ್ರತಿಭಟನೆ ವಿಷಯವನ್ನು ಸಿಪಿಐ ವಿಕಾಸ ಲಮಾಣಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ತಿಳಿಸಿದರು. ಆಗ ಶಾಸಕರು, ಡಿಎಫ್​ಒ ದೀಪಿಕಾ ವಾಜಪೇಯಿ ಜತೆಗೆ ಮಾತನಾಡಿ, ‘ಸದ್ಯಕ್ಕೆ ಬೇಲಿ ಹಾಕುವ ಕಾರ್ಯ ನಿಲ್ಲಿಸಿ. ಸಂಪುಟ ರಚನೆಯಾದ ಬಳಿಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಹೋರಾಟ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದರು. ಅವರ ಕೋರಿಕೆಯಂತೆ ಡಿಎಫ್​ಒ ತಂತಿ ಬೇಲಿ ಹಾಕುವುದನ್ನು ನಿಲ್ಲಿಸಲು ಸಿಪಿಐಗೆ ಸೂಚಿಸಿದರು. ಆಗ ತಂತಿ ಬೇಲಿ ಹಾಕುವುದನ್ನು ಬಿಡಲಾಯಿತು. ಆನಂತರ ಬಗರ್​ಹುಕುಂ ಸಾಗುವಳಿದಾರರು ಪ್ರತಿಭಟನೆ ಕೈಬಿಟ್ಟರು ಎಂದು ವಲಯ ಅರಣ್ಯಾಧಿಕಾರಿ ಎ.ಎಚ್. ಮುಲ್ಲಾ ವಿಜಯವಾಣಿಗೆ ತಿಳಿಸಿದರು.

    ಸೋಮಣ್ಣ ಲಮಾಣಿ, ರಡ್ಡಿ ಲಮಾಣಿ, ಭರಮಣ್ಣ ಚವ್ಹಾಣ, ಸೋಮು ಲಮಾಣಿ, ಶಿವಾಜಿ ಲಮಾಣಿ, ಸುನೀಲ ಲಮಾಣಿ, ಸಕ್ರವ್ವ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ, ರೇಣವ್ವ ಲಮಾಣಿ, ದೇವಕ್ಕ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts