More

    ಡ್ಯಾಮ್ಗಳಿಂದ ಜಮೀನಿಗೆ ನೀರು ಹರಿಸಿ

    ಚಿಂಚೋಳಿ: ಬೀದರ್, ಕಲಬುರಗಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿರುವ ಜಲಾಶಯಗಳ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್ ಒತ್ತಾಯಿಸಿದರು.
    ವಿಜಯವಾಣಿಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟಗೊಂಡ `ಡ್ಯಾಮ್ಗಳಿಗಿಲ್ಲ ಲೋಕಾರ್ಪಣೆ ಭಾಗ್ಯ’ ಶೀರ್ಷಿಕೆಯ ವಿಶೇಷ ವರದಿ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಅವರು, ಕ್ಷೇತ್ರದಲ್ಲಿನ ಚಂದ್ರಂಪಳ್ಳಿ, ಬೆಣ್ಣೆತೊರಾ, ಗಂಡೋರಿ ಜಲಾಶಯಗಳಿಂದ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.
    ಶಾಸಕರ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಅಧಿವೇಶನ ಮುಗಿದ ನಂತರ ಕಲಬುರಗಿಯಲ್ಲಿ ಶಾಸಕರ ಸಮ್ಮುಖದಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಜಲಾಶಯಗಳ ಬಗ್ಗೆ ಕೆಲವು ಪ್ರಕರಣಗಳು ಕೋರ್ಟ್​ನಲ್ಲಿದ್ದು, ಮಾ.25ರಂದು ತೀರ್ಪು ಬರಲಿದೆ. ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕು. ಕ್ಷೇತ್ರದಲ್ಲಿ ಸಾಕಷ್ಟು ನೀರಿದ್ದರೂ ಅನ್ನದಾತರಿಗೆ ತಲುಪಿಸುವ ಕೆಲಸ ನಡೆಯುತ್ತಿಲ್ಲ. ಕೆಳ ಮುಲ್ಲಾಮಾರಿ ಯೋಜನೆ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು. ಈ ಬಗ್ಗೆ ಇಲಾಖೆಗೆ ಈಗಾಗಲೇ 2 ಬಾರಿ ಮನವಿ ಸಲ್ಲಿಸಲಾಗಿದೆ. ಸಚಿವರು ಸ್ವಲ್ಪ ಗಮನಹರಿಸಬೇಕು.
    | ಡಾ.ಅವಿನಾಶ ಜಾಧವ್ ಶಾಸಕ


    ಏತ ನೀರಾವರಿ ಯೋಜನೆ ಬಗ್ಗೆ ಶಾಸಕ ಡಾ.ಅವಿನಾಶ ಜಾಧವ್ ಸದನದಲ್ಲಿ ಪ್ರಸ್ತಾಪಿಸಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ರೈತರ ಬಹುದಿನಗಳ ಕನಸು ನನಸಾಗಲಿದೆ. ಶೀಘ್ರವೇ ಸಚಿವರು, ಶಾಸಕರು ಹಾಗೂ ಸಂಸದರ ಸಭೆ ಕರೆಯಬೇಕು. ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನವಾಗಬೇಕು.
    | ಶಿವಾನಂದ ಪಾಟೀಲ್ ಐನಾಪುರ
    ಏತ ನೀರಾವರಿ ಯೋಜನೆ ಹೋರಾಟಗಾರ, ಚಿಂಚೋಳಿ


    ಕೆಳ ಮುಲ್ಲಾಮಾರಿ ಯೋಜನೆ ಕಾಮಗಾರಿ ಕಳಪೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಡಿಸಿಎಂ ಮುತುವಜರ್ಿ ವಹಿಸಿ ರೈತರ ಜಮೀನಿಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.
    | ಪ್ರಿಯಾಂಕ್ ಖರ್ಗೆ ಶಾಸಕ


    ರೈತರ ಅಭಿವೃದ್ಧಿಯೇ ಸರ್ಕಾರದ ಮೂಲ ಉದ್ದೇಶ. ಕಲಬುರಗಿ ಜಿಲ್ಲೆ ಜಲಾಶಯಗಳ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸಲಾಗುತ್ತಿದೆ. ಇನ್ನು ಕಳಪೆ ಕಾಮಗಾರಿ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಸರಿಯಾಗಿ ಕಾಮಗಾರಿ ನಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
    | ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts