More

    ಡೆಲ್ಟಾ ಪ್ಲಸ್ ಆತಂಕ, ತಪಾಸಣೆ ಬಿಗಿ

    ಬೆಳಗಾವಿ: ಕರೊನಾ ಎರಡನೇ ಅಲೆಯಿಂದ ಜನರು ಸಾಕಷ್ಟು ತಾಪತ್ರಯ ಅನುಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಸಂಭವನೀಯ ಮೂರನೇ ಅಲೆ ಎದುರಿಸಲು ಕಠಿಣ ಕ್ರಮ ಜಾರಿಗೊಳಿಸಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದರಿಂದ ಅಲ್ಲಿಂದ ರಾಜ್ಯ ಪ್ರವೇಶಿಸುವ ಹಾಗೂ ಇಲ್ಲಿಂದ ಅಲ್ಲಿಗೆ ಹೋಗುವ ಜನರಿಗೆ ಕರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.

    ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ: ಮಹಾರಾಷ್ಟ್ರದ ಕರೊನಾ ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬೆಳಗಾವಿಯಲ್ಲೂ ಆತಂಕ ಮನೆಮಾಡಿದೆ. ಮೂರನೆಯ ಅಲೆ ಉದ್ಭವಿಸುವ ಸಂಭಾವ್ಯತೆಯೂ ಇರುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಜಿಲ್ಲಾಡಳಿತವು ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ 14, ಗೋವಾದಿಂದ ಬರುವ ಮಾರ್ಗದಲ್ಲಿ-1 ಸೇರಿ 15 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವೈದ್ಯಕೀಯ, ಗ್ರಾಪಂ, ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಿದೆ. ಮಂಗಳವಾರ ರಾತ್ರಿಯಿಂದಲೇ ತಪಾಸಣೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

    40ಕ್ಕೂ ಹೆಚ್ಚು ವಾಹನ ವಾಪಸ್!: ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ನೆಗಟಿವ್ ವರದಿಗಳು ಇಲ್ಲದಿದ್ದರೆ ಅಂತಹವರನ್ನು ಸ್ಥಳದಲ್ಲಿಯೇ ರ‌್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಾರ್, ಬಾಡಿಗೆ ವಾಹನಗಳಲ್ಲಿ ಓಡಾಡುವವರ ಬಳಿ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಒಂದು ವೇಳೆ ನೆಗೆಟಿವ್ ವರದಿ, ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣ ಪತ್ರಗಳು ಇಲ್ಲದಿರುವವರನ್ನು ವಾಪಸ್ ಕಳುಹಿಸಿಕೊಡಲಾಗುತ್ತಿದೆ. ಇಲ್ಲಿಯವರೆಗೆ 40ಕ್ಕೂ ಅಧಿಕ ವಾಹನಗಳನ್ನು ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಲಾಗಿದೆ. ಅಲ್ಲದೆ, 120ಕ್ಕೂ ಅಧಿಕ ಜನರನ್ನು ರ‌್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಳಗಾವಿ, ನಿಪ್ಪಾಣಿ, ಕಾಗವಾಡ, ಅಥಣಿ, ಚಿಕ್ಕೋಡಿ ತಾಲೂಕುಗಳ ಜನ ಒಂದಿಲ್ಲೊಂದು ಕಾರಣಕ್ಕೆ ಮಹಾರಾಷ್ಟ್ರದ ಹಲವು ನಗರ-ಪಟ್ಟಣಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಉಭಯ ರಾಜ್ಯಗಳು ವ್ಯಾಪಾರ-ವಹಿವಾಟು ಹಾಗೂ ಆರೋಗ್ಯ ಸೇವೆ ಮೊದಲಾದ ಅಗತ್ಯಗಳಿಗಾಗಿ ಪರಸ್ಪರ ಅವಲಂಬಿತರಾಗಿರುವುದು ಮತ್ತು ಸಂಪರ್ಕ ಸಾಧಿಸಬೇಕಾದ ಅನಿವಾರ್ಯತೆ ಇರುವುದು ಆತಂಕ ಉಂಟಾಗುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts