More

    ಡಿಸೆಂಬರ್‌ನಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿ ಪೂರ್ಣ

    ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಮುಖ್ಯ ದ್ವಾರ, ಕೋಚಿಂಗ್ ಡಿಪೋ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು 2021 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿವೆ ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

    ನಗರದ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ರೈಲ್ವೆ ನಿಲ್ದಾಣ ಆವರಣದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು 2020ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್-19, ಲಾಕ್‌ಡೌನ್ ಇನ್ನಿತರ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು, ಈಗ ಎಲ್ಲ ಕಾಮಗಾರಿಗಳಿಗೂ ವೇಗ ಸಿಗಲಿದೆ ಎಂದರು.

    ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ: ನೆಲ ಮಹಡಿ ಸೇರಿ 3 ಮಹಡಿ ಹೊಂದಿರುವ ಮುಖ್ಯ ದ್ವಾರದ ಕಟ್ಟಡದಲ್ಲಿ 3 ಲಿಫ್ಟ್ ಸೌಲಭ್ಯ, ಕಾನ್‌ಕೋರ್ಸ್‌ಗೆ ಸ್ಕೈ ಪ್ರೇಮ್ ರಚನೆ ಮತ್ತು ಪ್ಲಾಟ್‌ಫಾರ್ಮ್ 1ರಲ್ಲಿ ಛಾವಣಿ ನಿರ್ಮಾಣವಾಗಲಿದೆ. ಈ ಕಟ್ಟಡದಲ್ಲಿ ನೆಲ ಮಹಡಿ ಮತ್ತು ಮೊದಲನೇ ಮಹಡಿಯಲ್ಲಿ ಫುಡ್ ಕೋರ್ಟ್, ಶಾಪಿಂಗ್ ಮಳಿಗೆಗಳ ಸೌಲಭ್ಯ ಇರುತ್ತದೆ. ಅಲ್ಲದೆ, ದ್ವಿಚಕ್ರ ವಾಹನ, ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಹೊಂದಿರುತ್ತದೆ. ಈ ಕಾಮಗಾರಿಗಳಿಗೆ ಅಂದಾಜು 44 ಕೋಟಿ ರೂ. ವೆಚ್ಚವಾಗಲಿದೆ. ಇನ್ನೂ 2ನೇ ಪ್ರವೇಶ ದ್ವಾರದ ನಿಲ್ದಾಣ ಕಟ್ಟಡ ಮತ್ತು ಸರ್ಕ್ಯುಲೇಟಿಂಗ್ ಪ್ರದೇಶದ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳಿಗೆ ಅಂದಾಜು 18 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.

    ಪಾದಚಾರಿ ಮೇಲ್ಸೇತುವೆ ನಿರ್ಮಾಣ: ಸುಮಾರು 48 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕೋಚಿಂಗ್ ಡಿಪೋ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. 624 ಮೀ. ಉದ್ದ ಪಿಟ್‌ಲೈನ್, 280 ಮೀ. ಉದ್ದದ ಸಿಕ್ ಲೈನ್ ಮತ್ತು 660 ಚದರ ಮೀ. ವಿಸ್ತೀರ್ಣದ ಸಿಕ್ ಲೈನ್ ಶೆಡ್, ಕೋಚಿಂಗ್ ಡಿಪೋಗಾಗಿ 600 ಚರದ ಮೀ. ವಿಸ್ತೀರ್ಣದ ಸೇವಾ ಕಟ್ಟಡಗಳನ್ನು ಒಳಗೊಂಡಿದೆ. ಅಂದಾಜು 80 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಯಾರ್ಡ್ ಮರುವಿನ್ಯಾಸ ಕಾಮಗಾರಿ ಆರಂಭದ ಹಂತದಲ್ಲಿವೆ. ಇಡೀ ನಿಲ್ದಾಣದ ಯಾರ್ಡ್‌ನಲ್ಲಿ ಬರುವ ಮುಖ್ಯ ಲೈನ್‌ಗಳು ಮತ್ತು ಲೂಪ್ ಲೈನ್ ಮೇಲ್ದರ್ಜೆಗೇರಿಸುವುದು, ವಿಸ್ತರಿಸುವುದು ಹಾಗೂ ಹೆಚ್ಚುವರಿ ಪ್ಲಾರ್ಟ್ ಫಾರ್ಮ್ ನಿರ್ಮಾಣದ ಕಾಮಗಾರಿಗಳು ಸೇರಿವೆ.

    ಪ್ರಯಾಣಿಕರ ಅನುಕೂಲಕ್ಕಾಗಿ 2ನೇ ಪ್ರವೇಶ ದ್ವಾರವನ್ನು ಎಲ್ಲ ನಾಲ್ಕು ಫ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕಿಸುವ ಹೊಸ ಪಾದಚಾರಿ ಮೇಲ್ಸೇತುವೆ, 2 ಲಿಫ್ಟ್‌ಗಳು ಮತ್ತು 3 ಎಸ್ಕ್‌ಲೇಟರ್‌ಗಳು ನಿರ್ಮಾಣಗೊಳ್ಳಲಿವೆ ಎಂದು ತಿಳಿಸಿದರು. ಶಾಸಕ ಅಭಯ ಪಾಟೀಲ, ರೈಲ್ವೆ ವಿಕಾಸ ನಿಗಮ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕ ಅರುಣಕುಮಾರ, ರೈಲ್ವೆ ಇಲಾಖೆಯ ವಿವಿಧ ಭಾಗದ ಅಧಿಕಾರಿಗಳು, ಇಂಜಿನಿಯರ್‌ಗಳು, ಸಿಬ್ಬಂದಿ ಇದ್ದರು.

    ಕರ್ನಾಟಕ-ಗೋವಾ ಗಡಿಯ ಪ್ರವಾಸಿ ತಾಣವಾಗಿರುವ ದೂಧಸಾಗರ ಜಲಪಾತ ವೀಕ್ಷಿಸಲು ತೆರಳಲು ಪ್ರವಾಸಿಗರಿಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
    | ಮಂಗಲ ಅಂಗಡಿ ಸಂಸದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts