More

    ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ರದ್ದು ಆದೇಶಕ್ಕೆ ಹೈಕೋರ್ಟ್ ತಡೆ

    ಶಿವಮೊಗ್ಗ: ನಿರ್ದೇಶಕ ಸ್ಥಾನದಿಂದ ಅಮಾನತು ಮಾಡಿದ್ದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ನ ಏಕಸದಸ್ಯ ಪೀಠ, ಗುರುವಾರ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿದೆ.

    ನಿರ್ದೇಶಕ ಸ್ಥಾನ ರದ್ದತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ರಾಜಣ್ಣ ರೆಡ್ಡಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದು ಹಾಗೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೊಷಿಸಿರುವುದನ್ನು ಪ್ರಶ್ನಿಸಿ ಆರ್.ಎಂ.ಮಂಜುನಾಥ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ದೇವದಾಸ್ ಅವರ ಏಕ ಸದಸ್ಯ ಪೀಠ ಸರ್ಕಾರದ ಎಲ್ಲ ಆದೇಶಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಹೀಗಾಗಿ ಗುರುವಾರ ನಡೆಯಬೇಕಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ರದ್ದಾಗಿದ್ದು, ಆರ್.ಎಂ. ಮಂಜುನಾಥ ಗೌಡ ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಚುನಾವಣೆ ರದ್ದು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆಯಬೇಕಿದ್ದ ಚುನಾವಣೆ ಹೈಕೋರ್ಟ್ ಆದೇಶದಿಂದ ರದ್ದುಗೊಂಡಿದೆ. ನಿಗದಿತ ವೇಳಾಪಟ್ಟಿಯಂತೆ ಗುರುವಾರ ಬೆಳಗ್ಗೆ 9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಬೆಳಗ್ಗೆ 10.30ರವರೆಗೂ ಚುನಾವಣೆ ಪ್ರಕ್ರಿಯೆ ಆರಂಭಿಸದಂತೆ ಬುಧವಾರ ಸಂಜೆ ಹೈಕೋರ್ಟ್ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿತ್ತು.

    ಗುರುವಾರ ಕೋರ್ಟ್ ಕಲಾಪದ ಆರಂಭದಲ್ಲೇ ಮಂಜುನಾಥ ಗೌಡ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲ ಪ್ರಕ್ರಿಯೆಗಳಿಗೂ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ಪ್ರಕ್ರಿಯೆ ರದ್ದುಪಡಿಸಲಾಯಿತು.

    ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ರಾಜಣ್ಣ ರೆಡ್ಡಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದ ಸರ್ಕಾರದ ಆದೇಶಕ್ಕೂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಅವರು ಮತ್ತೆ ಬ್ಯಾಂಕ್​ಗೆ ಮರಳಲಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಮರಳಿದ ಆರ್​ಎಂಎಂ: ಗುರುವಾರ ಹೈಕೋರ್ಟ್​ನಲ್ಲಿ ತಡೆಯಾಜ್ಞೆ ಘೊಷಣೆಯಾದ ಬಳಿಕ ಮಧ್ಯಾಹ್ನದ ವೇಳೆಗೆ ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಜುಲೈ 15ರಂದು ಸಹಕಾರ ಇಲಾಖೆ ಮಂಜುನಾಥ ಗೌಡರ ನಿರ್ದೇಶಕ ಸ್ಥಾನವನ್ನು ರದ್ದುಗೊಳಿಸಿತ್ತು. ಜುಲೈ 20ರಂದು ಬ್ಯಾಂಕ್​ನ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ 15 ದಿನಗಳ ಬಳಿಕ ಆರ್​ಎಂಎಂ ಮತ್ತೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

    ಸರ್ಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ನನಗೆ ಸದ್ಯಕ್ಕೆ ನ್ಯಾಯ ಸಿಕ್ಕಿದೆ. ಪ್ರಕರಣದ ಸಂಪೂರ್ಣ ವಿಚಾರಣೆ ನಡೆದು ಅಂತಿಮ ತೀರ್ಪು ಪ್ರಕಟವಾಗುವವರೆಗೂ ತಡೆಯಾಜ್ಞೆ ಜಾರಿಯಲ್ಲಿರುತ್ತದೆ. ಇನ್ನು ಯಾವುದೇ ಚುನಾವಣೆ ಪ್ರಕ್ರಿಯೆಗಳು ನಡೆಯುವುದಿಲ್ಲ. ಬ್ಯಾಂಕ್​ನ ಹಿಂದಿನ ಎಂಡಿ ಮತ್ತೆ ಸೇವೆಗೆ ಹಾಜರಾಗಬಹುದಾಗಿದೆ.

    | ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts