More

    ಡಿಜಿಟಲ್​ಗಿಂತ ಗ್ರಾಮೋದ್ಯೋಗ ತಂತ್ರಜ್ಞಾನ ಮುಖ್ಯ

    ಸಾಗರ: ಡಿಜಿಟಲ್ ತಂತ್ರಜ್ಞಾನಕ್ಕಿಂತ ಗ್ರಾಮೋದ್ಯೋಗ ತಂತ್ರಜ್ಞಾನ ಅತಿ ಮುಖ್ಯವಾಗಿದ್ದು ನಾವು ಗ್ರಾಮೋದ್ಯೋಗ ತಂತ್ರಜ್ಞಾನವನ್ನು ಮೂಲೆಗುಂಪು ಮಾಡುತ್ತಿದ್ದೇವೆ ಎಂದು ದೇಸಿ ಚಿಂತಕ ಚರಕ ಪ್ರಸನ್ನ ಹೇಳಿದರು.

    ನಗರದಲ್ಲಿ ಚರಕಾ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಮತ್ತು ಗ್ರಾಮ ಸೇವಾ ಸಂಘದಿಂದ ‘ಪವಿತ್ರ ಗ್ರಾಮೋದ್ಯೋಗ’ ಕುರಿತು ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ಮತ್ತು ಗ್ರಾಮೋದ್ಯೋಗ ತಂತ್ರಜ್ಞಾನದ ನಡುವೆ ಸಂಪರ್ಕ ಬೆಸೆಯುವ ಸೇತುವೆ ಗಟ್ಟಿಗೊಳಿಸಬೇಕು ಎಂದರು.

    ಗ್ರಾಮೋತ್ಪನ್ನಗಳನ್ನು ಖರೀದಿಸಲು ಉತ್ತೇಜನ ನೀಡುವ ಹೊಸ ವಿಧಾನವನ್ನು ನಾವು ಕಂಡು ಕೊಳ್ಳಬೇಕಾಗಿದೆ. ಪವಿತ್ರ ಗ್ರಾಮೋದ್ಯೋಗ ಮೂಲ ಸಮಾಜವಾದ ಮತ್ತು ಗಾಂಧಿ ಆಶಯಕ್ಕೆ ಪ್ರೇರಕವಾಗಿರಬೇಕು. ಸಮಾಜವಾದಿ ಆಶಯವನ್ನು ಹಿಂದೆ ತಳ್ಳಿ ಮೂಲ ಸಮಾಜವಾದಿ ಆಶಯ ಮುನ್ನಲೆಗೆ ತರಲು ಪವಿತ್ರ ಗ್ರಾಮೋದ್ಯೋಗದ ಪರಿಕಲ್ಪನೆ ಹೆಚ್ಚು ಅಗತ್ಯ ಎಂದು ತಿಳಿಸಿದರು.

    ಗ್ರಾಮೋದ್ಯೋಗದ ಮೇಲಿನ ನಂಬಿಕೆ ಕಳೆದುಕೊಳ್ಳಲು ಬಿಡಬಾರದು. ಕೌಶಲ ಇರಿಸಿಕೊಂಡವರು ಹಳ್ಳಿಯಲ್ಲಿದ್ದರೇ, ಕೆಲವರು ಆಧುನಿಕ ಕೌಶಲವನ್ನು ಜೇಬಿನಲ್ಲಿ ಇರಿಸಿಕೊಂಡು ದೊಡ್ಡ ದೊಡ್ಡ ನಗರಗಳ ಐಷಾರಾಮಿ ಕೊಠಡಿಯಲ್ಲಿದ್ದು ನಮ್ಮನ್ನು ಆಳುವ ಪ್ರಯತ್ನ ನಡೆಸುತ್ತಿದ್ದಾರೆ. ಗ್ರಾಮೋದ್ಯೋಗದಲ್ಲಿ ತೊಡಗಿಕೊಳ್ಳುವವರು ಕೋಟಿ ರೂಪಾಯಿ ಕೊಟ್ಟರೂ ಭಿಕ್ಷೆ ತೆಗೆದುಕೊಳ್ಳ ಬೇಡಿ. ನಮ್ಮ ಕೌಶಲದ ಬಗ್ಗೆ ನಮಗೆ ವಿಶ್ವಾಸ ಇರಬೇಕು ಎಂದು ಸಲಹೆ ನೀಡಿದರು.

    ರಾಜ್ಯದಲ್ಲಿ ನಾಲ್ಕು ಸಾವಿರ ಮಠಗಳಿವೆ. ಖಾವಿ ವಸ್ತ್ರವನ್ನು ಧರಿಸುವುದರಿಂದ ನೀವು ಕೊಡುವ ಹಣ ದುಡಿಮೆ ನಂಬಿಕೊಂಡ ಶ್ರಮಿಕವರ್ಗಕ್ಕೆ ಸೇರುತ್ತದೆ ಎನ್ನುವ ಮನೋಭಾವ ಬೆಳೆಸಬೇಕು. ಗ್ರಾಮೋದ್ಯೋಗದ ಮೂಲಕ ಉತ್ಪಾದನೆ ಮಾಡುವ ಕೈ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡಲು ಧೈರ್ಯವಾಗಿ ಮುನ್ನುಗ್ಗಬೇಕು. ಆಗ ರಾಜ್ಯದ ನೇಕಾರರ ಬದುಕು ಹಸನಾಗುತ್ತದೆ. ಇಂತಹ ಹೊಸ ರೀತಿಯ ಆಲೋಚನೆಗಳು ಪ್ರಸ್ತುತ ಹೆಚ್ಚು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪವಿತ್ರ ಗ್ರಾಮೋದ್ಯೋಗ ಪರಿಕಲ್ಪನೆಯನ್ನು ಜನಮಾನಸದಲ್ಲಿ ಬಿತ್ತುವ ಕೆಲಸವಾಗ ಬೇಕು ಎಂದು ತಿಳಿಸಿದರು.

    ಚಿತ್ರ ಕಲಾವಿದ ಸಾರಾ ಸಂಸ್ಥೆಯ ಅರುಣಕುಮಾರ್, ಪದ್ಮ ಶ್ರೀ, ಭಾಗೀರಥಿ ಇದ್ದರು.

    ಪವಿತ್ರ ಎಂದರೆ ಕಳಚುವುದು ಎಂದರ್ಥ. ಯಂತ್ರಗಳನ್ನು ಕಳಚುವ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಬೇಕು. ಪವಿತ್ರ ಆರ್ಥಿಕತೆ ಗಾಂಧಿ ಆರ್ಥಿಕತೆ ಆಗುವುದಿಲ್ಲ ಎಂದಾದರೇ ಕೈ ಉತ್ಪನ್ನಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಯುವ ಜನಾಂಗ ನೈತಿಕವಾಗಿ ಕುಗ್ಗಿ ಹೋಗುತ್ತಿದೆ. ಶೇ. 80 ಯುವ ಜನರು ಮೊಬೈಲ್ ಮೂಲಕವೇ ಎಲ್ಲವನ್ನೂ ದಕ್ಕಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅವರನ್ನು ಮತ್ತೆ ಗ್ರಾಮಗಳ ಕಡೆ, ಪವಿತ್ರ ಗ್ರಾಮೋದ್ಯೋಗದ ಕಡೆ ತರುವ ಪ್ರಯತ್ನವಾಗಬೇಕು.

    | ಚರಕ ಪ್ರಸನ್ನ, ದೇಸಿ ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts