More

    ಡಂಬಳ ಆರೋಗ್ಯ ಕೇಂದ್ರ ಬಂದ್

    ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕರೊನಾ ಸೇನಾನಿಯೊಬ್ಬನಿಗೆ (ನೇತ್ರ ತಂತ್ರಜ್ಞ) ಇತ್ತೀಚೆಗೆ ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ಡಂಬಳ ಆರೋಗ್ಯ ಕೇಂದ್ರವು ಸಂಪೂರ್ಣ ಸ್ತಬ್ಧವಾಗಿದೆ. ನಿತ್ಯವೂ ನೂರಾರು ರೋಗಿಗಳು ಈ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

    ಡಂಬಳ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯನ್ನೂ ಬಂದ್ ಮಾಡಲಾಗಿತ್ತು. ಸದ್ಯ ಹೊರ ರೋಗಿಗಳ ವಿಭಾಗವನ್ನು ಮಾತ್ರ ತೆರೆಯಲಾಗಿದೆ.

    ಸೋಂಕಿತನ ಸಂಪರ್ಕದಲ್ಲಿದ್ದ ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ 92 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿ ಅವರನ್ನೆಲ್ಲ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ, ಸಿಬ್ಬಂದಿ ಕೊರತೆಯಿಂದ ಡಂಬಳ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.

    ಆಸ್ಪತ್ರೆಯನ್ನು ಬಂದ್ ಮಾಡಿದ್ದರಿಂದ ಬಡವರಿಗೆ ತೊಂದರೆಯಾಗಿದೆ. ಹಣಕಾಸಿನ ತೊಂದರೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎನ್ನುವುದನ್ನು ತಿಳಿದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅನೇಕ ಜನರಿಗೆ ಕರೊನಾ ಭೀತಿ ಉಂಟಾಗಿದೆ. ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ಆಸ್ಪತ್ರೆಯನ್ನು ಪುನಾರಂಭಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

    ಬಾಗಲಕೋಟೆ ಜಿಲ್ಲಾ ಪ್ರವಾಸದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಸಿಬ್ಬಂದಿ ಕಳೆದ ಲಾಕ್​ಡೌನ್ ಸಮಯದಲ್ಲಿ ಚೆಕ್​ಪೋಸ್ಟ್​ನಲ್ಲಿ ಸೇವೆ ಸಲ್ಲಿಸಿದ್ದರು. ಹಾಗೆಯೇ ಕಳೆದ ವಾರದಲ್ಲಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಾಲ್ಕೈದು ದಿನ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಕೆಲಸ ಮಾಡಿದ್ದರು.

    ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಗರ್ಭಿಣಿಯರು, ವೃದ್ಧರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬಡವರು ಖಾಸಗಿ ಆಸ್ಪತ್ರೆಗೆ ತೆರಳಬೇಕಾದರೆ ಹಣಕಾಸಿನ ಸಮಸ್ಯೆಯಾಗಲಿದೆ.
    | ಮುತ್ತು ಹಿರೇಮಠ ಡಂಬಳ ಗ್ರಾಮಸ್ಥ

    ಸೋಂಕಿತ ಸಿಬ್ಬಂದಿಯ ಸಂಪರ್ಕದಲ್ಲಿದ್ದ ಎಲ್ಲ ವೈದ್ಯರು, ಸಿಬ್ಬಂದಿ ಸೇರಿ 92 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲರ ವರದಿಗಳು ನೆಗೆಟಿವ್ ಬಂದಿವೆ. ಆದರೂ ಒಂದು ವಾರ ಎಲ್ಲರನ್ನೂ ಹೋಂ ಕ್ವಾರಂಟೆನ್ ಮಾಡಲಾಗಿದೆ. ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ನೀಡಲಾಗುತ್ತಿಲ್ಲ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಪಿಡಿ ಚಿಕಿತ್ಸೆ ನೀಡಲಾಗುತ್ತಿದೆ. ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಅಥವಾ ಮಂಗಳವಾರ ಪ್ರಾರಂಭಿಸಲಾಗುತ್ತದೆ.
    | ಡಾ.ಬಸವರಾಜ ಕೆ, ಆರೋಗ್ಯ ವೈದ್ಯಾಧಿಕಾರಿ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts