More

    ಠೇವಣಿ ಆಧಾರದಲ್ಲಿ ನಗರಸಭೆ ಮಳಿಗೆ ಹಸ್ತಾಂತರ

    ಕೋಲಾರ: ನಗರಸಭೆಯ ವಾಣಿಜ್ಯ ಮಳಿಗೆಗಳ ವಿಲೇವಾರಿ ಸಂಬಂಧ ಸುದೀರ್ಘ ಚರ್ಚೆ ನಡೆದು ಠೇವಣಿ ಆಧಾರದಲ್ಲಿ ಯಶಸ್ವಿ ಬಿಡ್‌ದಾರರಿಗೆ ಅಂಗಡಿಗಳನ್ನು ಹಂಚಿಕೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

    ನಗರಸಭೆ ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಂಗಡಿಗಳನ್ನು ಬಾಡಿಗೆ ಆಧಾರದಲ್ಲಿ ಇಲ್ಲವೇ ಠೇವಣಿ ಆಧಾರದಲ್ಲಿ ವಿಲೇವಾರಿ ಮಾಡಲು ತೀರ್ಮಾನ ತೆಗೆದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶನದ ಸಂಬಂಧ ನಗರಸಭೆಯ ವಕೀಲರು ನೀಡಿರುವ ಕಾನೂನು ಸಲಹೆಗಳ ಬಗ್ಗೆ ಎರಡೂವರೆ ಗಂಟೆ ಚರ್ಚೆ ನಡೆಯಿತು.

    ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಲ್ಲಿ 226 ಅಂಗಡಿಗಳಲ್ಲಿ 220 ಬಾಡಿಗೆ ಮತ್ತು ಠೇವಣಿಗೆ, 6 ಅಂಗಡಿ ಹರಾಜಾಗದೆ ಉಳಿದಿದೆ. ಯಶಸ್ವಿ ಬಿಡ್‌ದಾರರಿಗೆ ಅಂಗಡಿ ವಿಲೇವಾರಿ ಬಗ್ಗೆ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ ಆರ್‌ಐ ಚಂದ್ರು ಸಭೆಗೆ ತಿಳಿಸಿದರು.

    ಸುರೇಶ್ ಬಾಬು ಮಾತನಾಡಿ, ಮಳಿಗೆ ವಿಲೇವಾರಿ ವಿಚಾರದಲ್ಲಿ ಗೊಂದಲದಿಂದಾಗಿ ನಗರಸಭೆಗೆ ವಾರ್ಷಿಕ 1 ಕೋಟಿ ರೂ ನಷ್ಟವಾಗುತ್ತಿದೆ. ಅಂಗಡಿ ಹರಾಜು ವಿಚಾರದಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಸ್ಪಷ್ಟ ತೀರ್ಮಾನ ತೆಗೆದುಕೊಂಡು ವಿಲೇವಾರಿ ಮಾಡಬೇಕು ಎಂದರು.
    ಮಾಜಿ ಅಧ್ಯಕ್ಷ ಬಿ.ಎಂ. ಮುಬಾರಕ್ ಮಾತನಾಡಿ, ತರಕಾರಿ ಮಾರುಕಟ್ಟೆ ಬಳಿಯ ಮಳಿಗೆ ಹಳೆಯದಾಗಿದ್ದು, 3 ಅಂತಸ್ತು ಕಟ್ಟಿದರೆ ಹೆಚ್ಚಿನಆದಾಯ ಬರುತ್ತದೆ. ರಸ್ತೆ ವಿಸ್ತರಣೆ ಪ್ರಸ್ತಾಪವಿರುವ ಎಂಜಿ ರಸ್ತೆಯಲ್ಲಿನ ಮಳಿಗೆ ಬಿಟ್ಟು ಉಳಿದ ಮಳಿಗೆಗಳನ್ನು ವಿಲೇವಾರಿ ಮಾಡಬೇಕು ಎಂದು ಪಟ್ಟು ಹಿಡಿದರು.

    ಪೌರಾಯುಕ್ತ ಎಸ್. ಪ್ರಸಾದ್ ಮಾತನಾಡಿ, ಅಂಗಡಿ ಮಳಿಗೆಗಳ ಹರಾಜಿನಲ್ಲಿ ಬಾಡಿಗೆ 7 ಅಂಗಡಿ, 139 ಅಂಗಡಿಗಳಿಗೆ ಠೇವಣಿ ಮತ್ತು ಬಾಡಿಗೆಗೆ ಒಬ್ಬರೇ ಯಶಸ್ವಿ ಬಿಡ್‌ದಾರರು. 55 ಅಂಗಡಿಗಳು ಬಾಡಿಗೆ ಮತ್ತು ಠೇವಣಿಗೆ ಬಿಡ್ ಕೂಗಿದ್ದಾರೆ. 10 ಅಂಗಡಿಗಳು ಅಂಗವಿಕಲರಿಗೆ ಮೀಸಲಾಗಿದೆ. ರೈಟ್ ಆಫ್ ರೆಫ್ಯೂಸಲ್‌ನಡಿ 8 ಅಂಗಡಿಗಳು ಹಾಲಿ ಇರುವವರಿಗೆ ನೀಡಬೇಕು ಎಂದರು.

    ಎಸ್.ಆರ್. ಮುರಳಿಗೌಡ ಮಾತನಾಡಿ, 2014ರಲ್ಲಿ ಅಂಗಡಿ ಮಳಿಗೆಗಳ ವಿಲೇವಾರಿ ಸಂಬಂಧ ನಗರಸಭೆ ತೀರ್ಮಾನದಲ್ಲಿನ ಲೋಪದ ಬಗ್ಗೆ ತಾವು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನ ಮೇಲೆ ತನಿಖೆಯಾಗಿದೆ. ಹಣ ಸಂಗ್ರಹಿಸಿದ ಕರ ವಸೂಲಿಗಾರ ರವಿ ಎಂಬುವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಡಿಸಿ ನಿರ್ದೇಶನ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದರು.

    ರಸ್ತೆ ವಿಸ್ತರಣೆಗೆ 4-1 ನೋಟಿಫಿಕೇಷನ್, ಕ್ರಿಯಾಯೋಜನೆ ರೂಪಿಸಿಲ್ಲ, ಅನುದಾನವಿಲ್ಲ, ಕೂಸು ಹುಟ್ಟುವ ಮುನ್ನವೇ ಕುಲಾವಿ ಯಾಕೆ, ಎಲ್ಲ ಮಳಿಗೆ ವಿಲೇವಾರಿ ಮಾಡುವಂತೆ ಆಗ್ರಹಿಸಿದಾಗ ರಾಕೇಶ್, ಸುರೇಶ್‌ಬಾಬು ಬೆಂಬಲಿಸಿದರು. ಎಸ್.ಎಸ್.ಕಾಂಪ್ಲೆಕ್ಸ್‌ನ ಅಂಗಡಿ ವಿಲೇವಾರಿ ಕೈಬಿಡುವುದಾದಲ್ಲಿ ಅಂಗಡಿ ಖಾಲಿ ಮಾಡಿಸಿ ಎಂದು ಫೈರೋಜ್‌ಖಾನ್ ಒತ್ತಾಯಿಸಿದರು.

    ಎರಡೂವರೆ ಗಂಟೆ ಚರ್ಚೆ ನಡೆದು ಠೇವಣಿ ಆಧಾರದಲ್ಲಿ ಯಶಸ್ವಿ ಬಿಡ್‌ದಾರರಿಗೆ ಮಳಿಗೆ ನೀಡುವ ತೀರ್ಮಾನಕ್ಕೆ ಬರಲಾಯಿತು. ರಸ್ತೆ ವಿಸ್ತರಣೆಗಿರುವ ಅಂಗಡಿ ಮಳಿಗೆ ಬಿಟ್ಟು ಉಳಿದವುಗಳನ್ನು ವಿಲೇವಾರಿ ಮಾಡಬೇಕೆಂಬ ಮುಬಾರಕ್ ಒತ್ತಾಯದ ಬಗ್ಗೆವ ಚರ್ಚೆ ನಡೆಯಿತೇ ವಿನಾ ಸರ್ವಾನುಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

    ಆಕ್ರೋಶ: ಮುಬಾರಕ್ ಪ್ರಸ್ತಾಪಕ್ಕೆ ಆಕ್ಷೇಪಿಸಿ ಉಪಾಧ್ಯಕ್ಷ ಪ್ರವೀಣ್‌ಗೌಡ ಮಾತನಾಡಿದಾಗ ವಾಕ್ಸಮರ ನಡೆಯಿತು. ಮಾತನಾಡುವ ಮುನ್ನ ಅನುಮತಿ ಪಡೆದಿಲ್ಲವೆಂದು ಅಧ್ಯಕ್ಷೆ ಶ್ವೇತಾ ತಿಳಿಸಿದಾಗ ಎಲ್ಲ ಸದಸ್ಯರೂ ಅಪ್ಪಣೆ ಪಡೆದೇ ಮಾತನಾಡುತ್ತಾರಾ ಎಂದು ಪ್ರವೀಣ್ ತಿರುಗೇಟು ನೀಡಿ ಅನುಮತಿ ಕೇಳಿದರು.

    ಮಹಿಳೆಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಸಂಗೀತ ಆಕ್ಷೇಪಿದರೆ, ನಿಮ್ಮ ಜಗಳ ನೋಡಲು ನಾವು ಬರುವುದೇ, ಅಜೆಂಡಾ ಬಿಟ್ಟು ಬೇರೆ ವಿಷಯ ಚರ್ಚಿಸಿ ದಿಕ್ಕು ತಪ್ಪಿಸಬೇಡಿ ಎಂದು ಮಾಜಿ ಅಧ್ಯಕ್ಷೆ ನಾಜಿಯಾ ಆಕ್ರೋಶ ವ್ಯಕ್ತಪಡಿಸಿದರು.
    ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯರು ಹಾಜರಿದ್ದರು.

    ರಸ್ತೆ ವಿಸ್ತರಣೆಗೆ ಜೈ: ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, ಶ್ರೀನಿವಾಸಪುರ ವೃತ್ತದಿಂದ ಗಾಂಧಿವನದವರೆಗೆ ಹಾಗೂ ಪ್ರಭಾತ್ ಟಾಕೀಸ್ ರಸ್ತೆಯಿಂದ ಶಾರದಾ ಟಾಕೀಸ್‌ವರೆಗೆ ರಸ್ತೆ ವಿಸ್ತರಣೆಗೆ ಸಹಕಾರ ನೀಡಿ, ನಗರಸಭೆಗೆ ಹೆಸರು ಬರುತ್ತದೆ ಎಂದಾಗ ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಸಹಮತ ವ್ಯಕ್ತಪಡಿಸುತ್ತಲೇ ಎಮ್ಮೆಲ್ಸಿ ನಜೀರ್ ಅಹಮದ್ ಜತೆ ನಿರ್ಗಮಿಸಿದರು.

    ಹೈ ಡ್ರಾಮಾ…: ಹರಾಜಿನಲ್ಲಿ ಠೇವಣಿ ಕಟ್ಟಿರುವ ಯಶಸ್ವಿ ಬಿಡ್‌ದಾರರು ತಮಗೆ ಮಳಿಗೆ ವಿಲೇವಾರಿ ಮಾಡಿ ಇಲ್ಲವೇ ಠೇವಣಿ ಹಣ ಬಡ್ಡಿ ಸಮೇತ ವಾಪಸ್ ನೀಡುವಂತೆ ಕಾರ್ಯಾಲಯದ ಎದುರು ಪ್ರತಿಭಟನೆ ವ್ಯಕ್ತಪಡಿಸಿ ಸಭಾಂಗಣದೊಳಕ್ಕೆ ನುಗ್ಗಲು ಪ್ರಯತ್ನಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರು ಮುಖ್ಯದ್ವಾರದ ಬಾಗಿಲು ಹಾಕಿ ತಡೆದರು. ಕೌನ್ಸಿಲ್ ಸಭೆಯಲ್ಲಿ ಸದಸ್ಯರಲ್ಲದವರಿಗೆ ಅವಕಾಶ ಇಲ್ಲ ಎಂದು ಶಾಸಕ ಶ್ರೀನಿವಾಸಗೌಡ ತಾಕೀತು ಮಾಡಿದರು.

    ಠೇವಣಿ ಆಧಾರದಲ್ಲಿ ಯಶಸ್ವಿ ಬಿಡ್‌ದಾರರರಿಗೆ ಮಳಿಗೆ ಹಂಚಲು ಕೌನ್ಸಿಲ್ ತೆಗೆದುಕೊಂಡಿರುವ ತೀರ್ಮಾನವನ್ನು ಜಿಲ್ಲಾಧಕಾರಿಗಳ ಗಮನಕ್ಕೆ ತರಲಾಗುವುದು. ರಸ್ತೆ ವಿಸ್ತರಣೆಗೆ ಗುರುತಿಸಿರುವ ಮಳಿಗೆಗಳ ವಿಲೇವಾರಿಯಿಂದ ಕೈಬಿಡುವ ಬಗ್ಗೆ ಚರ್ಚೆಯಷ್ಟೇ ನಡೆದಿದೆ.
    ಎಸ್.ಪ್ರಸಾದ್, ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts