More

    ಟ್ರಕ್ ಟರ್ಮಿನಲ್ ನಿರ್ಮಾಣ ಶೀಘ್ರ: ಅಧಿಕಾರಿಗಳ ಸಭೆಯಲ್ಲಿ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಭರವಸೆ

    ಕೋಲಾರ: ಜಿಲ್ಲೆಯಲ್ಲಿ ಸರಕು ಸಾಗಣೆ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಶ್ರೀ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ವಾಜಿ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ, ನಗರಸಭೆ, ಕೆಐಎಡಿಬಿ ಹಾಗೂ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಹಲವು ಹೆದ್ದಾರಿಗಳು ಹಾದುಹೋಗಿದ್ದು, ನಗರ ಪ್ರದೇಶಗಳು ಸೇರಿ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದಿಷ್ಟೇ ಅಲ್ಲದೆ ಬೆಂಗಳೂರು ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡರೆ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈಗಲೇ ಸಾರ್ವಜನಿಕರು ನಿತ್ಯ ಕೆಲಸ, ಕಾರ್ಯಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಮುಂದೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಮುಂದಾಲೋಚನೆಯಾಗಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಅನುವಾಗುವಂತೆ ಯೋಗ್ಯ ಜಮೀನು ವಶಪಡಿಸಿಕೊಳ್ಳಬೇಕಿದೆ ಎಂದರು.

    ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪನೆಯಾಗುವುದರಿಂದ ಸ್ವಲ್ಪ ಮಟ್ಟಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಅದರ ಸುತ್ತಮುತ್ತ ಮಿನಿ ಟೌನ್‌ಷಿಪ್ ನಿರ್ವಾಣವಾಗುತ್ತದೆ. ಅದರಲ್ಲಿ ಹಲವು ಉದ್ಯೋಗಾವಕಾಶ ಸಿಗುತ್ತವೆ. ರಾತ್ರಿ ಸಮಯದಲ್ಲಿ ಸರಕು ತುಂಬಿರುವ ಬಹತ್ ಲಾರಿಗಳು ಸಂಚರಿಸುತ್ತವೆ. ಅಂತಹ ವಾಹನಗಳ ಚಾಲಕರಿಗೆ ಅನುಕೂಲವಾಗಲು ಟ್ರಕ್ ಟರ್ಮಿನಲ್ ನಿರ್ಮಿಸಲಾಗುತ್ತಿದ್ದು, ಅವರು ಉಳಿದುಕೊಳ್ಳಲು ವಸತಿ, ಊಟ, ಪೆಟ್ರೋಲ್ ಬಂಕ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತದೆ. ಚಾಲಕರು ಆಯಾಸ ನೀಗಿಸಿಕೊಂಡು ಮುಂದೆ ಸಾಗುವುದರಿಂದ ರಸ್ತೆ ಅಪಘಾತ ಸಹ ಕಡಿಮೆಯಾಗುತ್ತದೆ ಎಂದರು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ವಾತನಾಡಿ, ಟ್ರಕ್ ಟರ್ಮಿನಲ್ ನಿರ್ಮಿಸುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದಕ್ಕೆ ಕೆಜಿಎಫ್ ತಾಲೂಕಿನಲ್ಲಿ ಸರ್ಕಾರದ ಜಮೀನು 200 ಎಕರೆ ಇದ್ದು, ಸರ್ಕಾರದಿಂದ ಅನುಮತಿ ಪಡೆದು, ಅದರಲ್ಲಿ 50 ಎಕರೆ ಜಮೀನನ್ನು ಟ್ರಕ್ ಟರ್ಮಿನಲ್ ನಿರ್ಮಿಸಲು ನೀಡಲಾಗುವುದು ಎಂದರು.

    ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ, ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

    ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಸ್ಥಾಪನೆಯಾಗಿ 32 ವರ್ಷ ಕಳೆದಿದೆ. ಟ್ರಕ್ ಟರ್ಮಿನಲ್ ನಿರ್ಮಿಸುವುದರಿಂದ ಟ್ರಾಫಿಕ್ ಸಮಸ್ಯೆ ನಿವಾರಿಸಬಹುದು. ಪರಿಸರ ವಾಲಿನ್ಯ ತಡೆ ಮತ್ತು ಅಪಘಾತ ತಡೆಯಬಹುದು.
    ಡಿ.ಎಸ್.ವೀರಯ್ಯ, ಅಧ್ಯಕ್ಷ, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts