More

    ಟೋಲ್​ಗೇಟ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

    ಗದಗ: ತಾಲೂಕಿನ ಪಾಪನಾಶಿ ಬಳಿ ಅವೈಜ್ಞಾನಿಕವಾಗಿ ನಿರ್ವಿುಸಿದ ಟೋಲ್​ಗೇಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಗದಗದಿಂದ 10 ಕಿ.ಮೀ. ದೂರದಲ್ಲಿರುವ ಈ ಟೋಲ್​ಗೇಟ್ ಎತ್ತರ ಪ್ರದೇಶದ ತಿರುವಿನಲ್ಲಿದೆ. ರಸ್ತೆ ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದಾಗಿ ಇಲ್ಲಿ ಅಪಘಾತವಾಗುವ ಸಾಧ್ಯತೆಯಿದೆ. ಮೂಲ ಸೌಲಭ್ಯ ಒದಗಿಸದೇ 100 ರೂ. ದಿಂದ 250 ರೂ. ಟೋಲ್ ಶುಲ್ಕ ತೆರಬೇಕಾಗಿದೆ. ರಾಜ್ಯದ ಯಾವುದೇ ಟೋಲ್​ಗೇಟ್​ನಲ್ಲಿ ಇಷ್ಟು ಹಣ ವಸೂಲಿ ಮಾಡುತ್ತಿಲ್ಲ. ಅಲ್ಲದೆ, ಗದಗ-ಮುಂಡರಗಿ ಮಾರ್ಗದಲ್ಲಿ ಟೋಲ್​ಗೇಟ್ ನಿರ್ವಿುಸುವ ಅನಿವಾರ್ಯತೆ ಇರಲಿಲ್ಲ. ಟೋಲ್​ಗೇಟ್ ಆರಂಭವಾದ ದಿನದಿಂದ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್​ಗಳ ದರ ಏರಿಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದರೆ, ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಲಾಕ್​ಡೌನ್​ನಿಂದ ಎರಡೂವರೆ ತಿಂಗಳಿಂದ ಬಂದ್ ಮಾಡಿದ್ದ ಟೋಲ್​ಗೇಟ್ ಅನ್ನು ಮೇ 31ರಿಂದ ಪುನರಾರಂಭಿಸಿ ಹಣ ಸಂಗ್ರಹಿಸಲಾಗುತ್ತಿದೆ. ಕರೊನಾದಿಂದ ತತ್ತರಿಸಿದ ಜನರಿಗೆ ಉದ್ಯೋಗವಿಲ್ಲ, ವ್ಯವಹಾರವೂ ನಡೆಯುತ್ತಿಲ್ಲ. ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿದೆ. ಜನರ ಬಳಿ ಹಣವಿಲ್ಲ. ಇಂಥ ಸಂದರ್ಭದಲ್ಲಿ ಟೋಲ್​ಗೇಟ್ ಆರಂಭಿಸಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

    ಟೋಲ್​ಗೇಟ್ ಬಂದ್ ಮಾಡುವಂತೆ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಈ ಟೋಲ್​ಗೇಟ್​ನಿಂದ ಮುಂಡರಗಿ ತಾಲೂಕಿನ ಡೋಣಿ, ಡಂಬಳ, ಪಾಪನಾಶಿ, ಕದಾಂಪುರ, ಮುಂಡರಗಿ ಪಟ್ಟಣದ ಪ್ರಯಾಣಿಕರು, ಟೋಲ್ ಬಳಿಯ ಗ್ರಾಮಗಳ ರೈತರಿಗೆ ತೊಂದರೆಯಾಗುತ್ತಿದೆ. ಟೋಲ್​ಗೇಟ್ ಬೇಗ ತೆರವುಗೊಳಿಸಬೇಕು ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠಗೆ ಮನವಿ ಸಲ್ಲಿಸಲಾಯಿತು.

    ಸಂಘಟನೆ ಕಾರ್ಯಕರ್ತರಾದ ಹಾಲಪ್ಪ ವರವಿ, ರಮೇಶ ರಾಥೋಡ, ಈಶ್ವರ ಲಕ್ಷ್ಮೇಶ್ವರ, ನಾಗರಾಜ ಕ್ಷತ್ರಿಯ, ಸಂಗು ಅಂಗಡಿ, ಶರೀಫ ಬೆನಕಲ್, ಮಂಜು ಮೇಟಿ, ಚಂದ್ರು ಗೋಗೇರಿ, ವಿಠ್ಠಲ ಬೆಂತೂರ, ಚಂದ್ರು ಖಾನಾಪುರ, ಮಾರುತಿ ಕಟ್ಟಿಮನಿ, ಮೌನೇಶ, ಮೋಹನ ಮುರಳಿ, ಶೇಖಪ್ಪ ಕಟ್ಟಿಮನಿ, ಪುರೋಷತ್ತಮ, ಸಂಜು ಹುಲ್ಲೂರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts