More

    ಟುಕುಡೆ ಟುಕುಡೆ ಗ್ಯಾಂಗ್ ಪಾಕಿಸ್ತಾನಕ್ಕೆ ಹೋಗಲಿ

    ಹುಬ್ಬಳ್ಳಿ: ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಬಹಳಷ್ಟು ಅನುಕೂಲವಾಗಲಿದೆ. ಆದಾಗ್ಯೂ ಟುಕುಡೆ ಟುಕುಡೆ ಗ್ಯಾಂಗ್ ಊಹಾಪೋಹಗಳನ್ನು ಎಬ್ಬಿಸುತ್ತಿದೆ. ಜಾತಿವಾದಿಗಳು, ಆತಂಕವಾದಿಗಳು, ದೇಶ ವಿಭಜಕರು ದೇಶದಲ್ಲಿರಲು ಯೋಗ್ಯರಲ್ಲ. ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು.

    ಅಂಜನಾ ಪಟೇಲ್ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶುಕ್ರವಾರ ಗೋಕುಲ ರಸ್ತೆಯ ಕೋಟಿಲಿಂಗ ನಗರದಲ್ಲಿರುವ ರಾಧಾಕೃಷ್ಣ ರಾಜಾರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಶ್ರೀ ರಾಜೇಶ್ವರ ಸಭಾಭವನ ಲೋಕಾರ್ಪಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

    ದೇಶದ ಸ್ವಾತಂತ್ರ್ಯ್ಕಾಗಿ ಬಹಳಷ್ಟು ಜನರು ಹೋರಾಟ ಮಾಡಿದರು. ಈ ಹೋರಾಟದಲ್ಲಿ ಟುಕುಡೆ ಟುಕುಡೆ ಗ್ಯಾಂಗ್​ನ ಕೊಡುಗೆ ಏನೂ ಇಲ್ಲ. ದೇಶದ ರಕ್ಷಣೆಗೆ ನಿಲ್ಲುವವರು ಮತ್ತು ಗೌರವ ಕೊಡುವವರು ದೇಶಕ್ಕೆ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಅನೇಕ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಅಮಲು ಪದಾರ್ಥ ದೇಶಕ್ಕೆ ಬಂದದ್ದು ಮೊಘಲರ ಕಾಲದಲ್ಲಿ ಎಂದ ಅವರು, ಯಾರೂ ನಶೆ ತರಿಸುವ ಪದಾರ್ಥಗಳ ದಾಸರಾಗಬಾರದು. ದೇಶಕ್ಕೆ ಉಕ್ಕಿನ ದೇಹಗಳು ಬೇಕು. ಪಟೇಲ್ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವತ್ತ ದೃಷ್ಟಿ ಹರಿಸಬೇಕು. ಎಲ್ಲರೊಂದಿಗೆ ಸೌಹಾರ್ದದಿಂದ ಇದ್ದು ತಂತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

    ಅತಿಥಿಯಾಗಿ ಪಾಲ್ಗೊಂಡಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ರಾಜಸ್ಥಾನಕ್ಕೆ ಬಹಳಷ್ಟು ಸಲ ಹೋಗಿ ಬಂದಿದ್ದೇನೆ. ಅಲ್ಲಿನ ಆದರಾತಿಥ್ಯ ಅತ್ಯದ್ಭುತ. ಅಲ್ಲಿನ ಹವಾಗುಣ, ನೀರು ಖುಷಿ ಕೊಡುತ್ತದೆ. ಕೃಷಿ ಪ್ರಧಾನವಾಗಿರುವ ಆ ರಾಜ್ಯದಲ್ಲಿ ಸಂಸ್ಕೃತಿ-ಸಂಸ್ಕಾರದ ಕೊರತೆ ಇಲ್ಲ. ಕರ್ನಾಟಕಕ್ಕೆ ಬಂದಿರುವ ಈ ಸಮಾಜದವರು ಉತ್ತಮ ವ್ಯವಹಾರ ಮಾಡುತ್ತಿದ್ದಾರೆ. ಆರ್ಥಿಕ ಉನ್ನತಿ ಎಂದರೇನೆಂದು ಅವರಿಂದ ಕಲಿಯಬೇಕು. ತಾವು ಬೆಳೆಯುವುದಲ್ಲದೇ ತಮ್ಮ ಜನರನ್ನು ಇಲ್ಲಿಗೆ ಕರೆತಂದು ಬೆಳೆಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿ ಸಮಾಜದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಈ ಸಮಾಜದವರು ಯಾವುದೇ ಕಾರ್ಯಕ್ರಮ ಮಾಡಿದರೂ ಸರ್ಕಾರ ತಮ್ಮ ಪರವಾಗಿರಲಿದೆ ಎಂದು ಹೇಳಿದರು.

    ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು.

    ಅಂಜನಾ ಪಟೇಲ್ ಸಮಾಜದ ಸ್ವಾಮೀಜಿ ರಾಜಸ್ಥಾನದ ಶ್ರೀ ಪೀರಾತಾಸ ಶಿಕಾರಪುರ ಪೀಠದ ದಯಾರಾಮಜಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

    ರಾಜಸ್ಥಾನದ ಮಾಜಿ ಸಚಿವರಾದ ಜೋಗರಾಮ ಪಟೇಲ್, ಭಾಗರಾಜ್ ಚೌಧರಿ, ಅಮರರಾಮಜಿ ಚೌಧರಿ, ಶಾಸಕ ಪುರರಾಮಜೀ ಚೌಧರಿ, ಮಾಜಿ ಶಾಸಕ ಜೀವರಾಮ ಚೌಧರಿ, ಮಾಜಿ ಸಂಸದ ಹುಬ್ಬಳ್ಳಿಯ ಐ.ಜಿ. ಸನದಿ, ಪ್ರಮುಖರಾದ ಮಲ್ಲಿಕಾರ್ಜುನ ಸಾವಕಾರ, ಲಿಂಗರಾಜ ಪಾಟೀಲ, ಭವರಲಾಲ್ ಜೈನ್, ಸುಭಾಷ್​ಸಿಂಗ್ ಜಮಾದಾರ, ಸಂಘದ ಅಧ್ಯಕ್ಷ ದುದಾರಾಮ ಚೌಧರಿ, ಪ್ರಧಾನ ಕಾರ್ಯದರ್ಶಿ ಕಿಶೋರ ಪಟೇಲ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts